

ಸೋಮವಾರಪೇಟೆ: ರಾಜ್ಯ ಸರ್ಕಾರದ ದುರಾಡಳಿತವನ್ನು ಖಂಡಿಸಿ ಪ್ರತಿಭಟಿಸುವುದು ನಮ್ಮೆಲ್ಲರ ಹೊಣೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಪಟ್ಟಣದ ಕೊಡವ ಸಮಾಜದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹಗರಣಗಳ ಸುಳಿಯಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದಲ್ಲಿ ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಪ್ರತಿನಿತ್ಯ ಹಗರಣಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಬಹುತೇಕ ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರ್ಕಾರದ್ದು ಎಂದು ಹೇಳಿದರು.
ಕೊಡಗಿನಲ್ಲಿ ನಾವು ಎರಡು ಶಾಸಕರು ಕಳೆದುಕೊಂಡಿದ್ದೇವೆ. ಆದರೆ ಆಡಳಿತ ಪಕ್ಷದಿಂದ ಗೆದ್ದಿರುವ ಶಾಸಕರು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗಿನ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿದ್ದವು. ಈಗ ರಸ್ತೆಗಳ ಅಭಿವೃದ್ಧಿಯಾಗುತ್ತಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಕಾಳಪ್ಪ, ಮಾಜಿ ಅಧ್ಯಕ್ಷ ಭಾರತೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ರವಿ ಸೇರಿದಂತೆ ಮತ್ತಿತರರು ಇದ್ದರು.