

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ಸಮೀಪವಿರುವ ನಗರಸಭೆ ಘನತ್ಯಾಜ್ಯ ಘಟಕದಲ್ಲಿನ ಕಸದ ರಾಶಿಯಲ್ಲಿ ನಾಲ್ಕು ದಿನಗಳಿಂದಲೂ ಬೆಂಕಿ ಹೊತ್ತಿ ಉರಿಯುತ್ತಿದ್ದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸತತವಾಗಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದರೂ, ಬೆಂಕಿ ಹತೋಟಿಗೆ ಬರುತ್ತಿಲ್ಲ.
ತ್ಯಾಜ್ಯ ಘಟಕದಲ್ಲಿನ ಕಸದಲ್ಲಿ ಕಾಣಿಸಿಕೊಂಡು ಬೆಂಕಿಯಿಂದ ಹೊರಬರುತ್ತಿರುವ ಹೊಗೆ ಸುತ್ತಲೂ ಗಾಢವಾಗಿ ಆವರಿಸಿದ್ದರಿಂದ ಪರಿಸ್ಥಿತಿ ಅವಲೋಕಿಸಲು ಶನಿವಾರ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗೆ ಹಿತ್ತಲಹಳ್ಳಿ ಗ್ರಾಮಸ್ಥರು ಕೆಲಕಾಲ ದಿಗ್ಬಂಧನ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರಸಭೆ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್, ಕಂದಾಯ ಆಧಿಕಾರಿ ನಾಗರಾಜ್, ಕೃಷ್ಣಮೂರ್ತಿ, ರಾಜೇಶ್, ಆಥಿಕ್ ಇನ್ನಿತರರನ್ನು ಸುತ್ತುವರಿದ ಗ್ರಾಮಸ್ಥರು ಸಮಸ್ಯೆಯನ್ನು ವಿವರಿಸಿದರು. ಸಾಕಷ್ಟು ಬಾರಿ ಸಮಸ್ಯೆಯನ್ನು ಹೇಳಿಕೊಂಡಿದ್ದರೂ ಶಾಶ್ವತ ಪರಿಹಾರ ಒದಗಿಸದ್ದಕ್ಕೆ ಕೋಪಗೊಂಡರು. ಇನ್ನೆಷ್ಟು ದಿನ ಈ ಸಮಸ್ಯೆ. ಒಂದೋ ಇಲ್ಲಿಂದ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಿ ಇಲ್ಲವೇ ಹಿತ್ತಲಹಳ್ಳಿ ಗ್ರಾಮವನ್ನೇ ಸ್ಥಳಾಂತರಿಸಿಬಿಡಿ ಎಂದು ಬೇಸರದಿಂದ ನುಡಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೆಲಕಾಲ ಹೊರಬಿಡದೆ ಘಟಕದೊಳಗೆ ದಿಗ್ಬಂಧನ ಹಾಕಿದರು.
ಇದೀಗ ಹೊತ್ತಿಕೊಂಡು ಉರಿಯುತ್ತಿರುವ ಬೆಂಕಿಯನ್ನು ನಂದಿಸಿ ನಂತರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿ ಇಲ್ಲವಾದಲ್ಲಿ ಗ್ರಾಮಸ್ಥರು ಎಲ್ಲರೂ ಸೇರಿ ಘಟಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.
ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಸದಸ್ಯ ನರಸಿಂಹ ಮೂರ್ತಿ, ಎಚ್.ಜಿ. ಗೋಪಾಲಗೌಡ, ಎಚ್.ಕೆ.ಸುರೇಶ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಲೋಕೇಶ್, ಗೋಪಾಲಕೃಷ್ಣ, ಮುನಿರಾಜು, ಮುರಳಿ, ಮುನಿಕೃಷ್ಣ, ಮೋಹನ್, ಹಾಗೂ ಇತರ ಗ್ರಾಮದ ಮುಖಂಡರು ಹಾಜರಿದ್ದರು.