

ಆಲೂರು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶಾಲಾ ನಿರ್ಮಾಣಕ್ಕೆ ಕಾಯ್ದಿರಿಸಿದ್ದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮನುಷ್ಯನ ತಲೆಬುರುಡೆ ಪತ್ತೆಯಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಸರ್ವೇ ನಂಬರ್ 103ರಲ್ಲಿ ಎರಡು ಎಕರೆ ಜಾಗವನ್ನು ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಮಂಜೂರು ಮಾಡಲಾಗಿತ್ತು. ಗುತ್ತಿಗೆದಾರರು ಕಾಂಪೌಂಡ್ ನಿರ್ಮಾಣಕ್ಕೆ ಬುಧವಾರ ಜೆಸಿಬಿಯಿಂದ ಜಾಗ ಸಮತಟ್ಟು ಮಾಡುವ ವೇಳೆ ಮನುಷ್ಯನ ತಲೆಬುರುಡೆ ಕಂಡುಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಮಾತನಾಡಿ, ಹಿಂದೆ ಬಿ.ಬಿ.ಶಿವಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಗ್ರಾಮದ ಸ.ನಂ. 103ರ ಜಾಗದಲ್ಲಿ ರುದ್ರಭೂಮಿಗಾಗಿ ಜಾಗ ಕಾಯ್ದಿರಿಸಿದ್ದರು. ಸುಮಾರು 25 ವರ್ಷಗಳಿಂದ ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಸಂಬಂಧಿಕರ ಮೃತದೇಹಗಳನ್ನು ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ಇತ್ತೀಚೆಗೆ ಗ್ರಾಮಸ್ಥರ ವಿರೋಧದ ನಡುವೆಯೂ ರುದ್ರಭೂಮಿಯನ್ನು ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣಕ್ಕೆ ಮಂಜೂರು ಮಾಡಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಾಲಕಿಯರ ಶಾಲೆಗೆ ಇದು ಸೂಕ್ತವಾದ ಜಾಗವಲ್ಲ. ಈ ಜಾಗದಲ್ಲಿ ನೂರಾರು ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. ಇಲ್ಲಿ ವಸತಿ ಶಾಲೆ ನಿರ್ಮಾಣ ಮಾಡಿದರೆ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಆದ್ದರಿಂದ ಮಲ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಹುಡುಕಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಉಪಾಧ್ಯಕ್ಷ ಕೃಷ್ಣಪ್ಪ, ಗ್ರಾಮದ ಮುಖಂಡ ಉಮಾಕಾಂತ್, ಮಲ್ಲಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಹಾಜರಿದ್ದರು.