

ವೇಮಗಲ್: ಮುಂದೊಂದು ದಿನ ರೈತರ ಕಾಲು ಹಿಡಿಯುವ ಪರಿಸ್ಥಿತಿ ಜನರಿಗೆ ಮತ್ತು ಸರ್ಕಾರಕ್ಕೆ ಬರಲಿದೆ. ರೈತರಿಂದಲೇ ಜೀವನ ಮುಖ್ಯವಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ ತಾಲೂಕು ವೇಮಗಲ್ ಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ಹಾಗೂ ಮ್ಯಾಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇವತ್ತು ರೈತನ ಮಗ ರೈತನಾಗುತ್ತಿಲ್ಲ ರೈತರು ಎಂದರೆ ಸಮಾಜದಲ್ಲಿ ತಾರತಮ್ಯ ನಡೆಯುತ್ತಿದೆ. ಆದರೆ, ರೈತರಿಂದಲೇ ಜೀವನ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜತೆಗೆ ರೈತರ ಕಷ್ಟವನ್ನು ಯುವ ಪೀಳಿಗೆಗೆ ತಿಳಿವಳಿಕೆ ನೀಡಬೇಕು ಎಂದರು.
ಯಾವುದೇ ಸಹಕಾರಿ ಸಂಸ್ಥೆಯನ್ನು ನ್ಯಾಯ, ನೀತಿ, ಧರ್ಮದಿಂದ ಅಭಿವೃದ್ಧಿಪಡಿಸಬೇಕು. ದೇಶಕ್ಕೆ ಜನರಿಗೆ ಆರೋಗ್ಯ, ಶಿಕ್ಷಣದ ಜತೆಗೆ ಕೃಷಿಗೆ ಪೋತ್ಸಾಹ ನೀಡಬೇಕು, ಹಾಲು ಉತ್ಪಾದಕರು ಸಹ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಕೋಮುಲ್ ನೇತೃತ್ವದಲ್ಲಿ 12 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕ ಪ್ರಾರಂಭಿಸಿದ್ದು, ಇದರಿಂದಾಗಿ ತಿಂಗಳಿಗೆ ಎರಡು ಕೋಟಿ ವಿದ್ಯುತ್ ಶುಲ್ಕ ಉಳಿಯಲಿದೆ. ಈ ಹಣವನ್ನು ಜಿಲ್ಲೆಯಲ್ಲಿರುವ ಬಿಎಂಸಿ ಕೇಂದ್ರಗಳಿಗೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಶೇ.50 ವಿದ್ಯುತ್ ಶುಲ್ಕ ಬರಿಸಲು ಮುಂದಿನ ಆಡಳಿತ ಮಂಡಳಿಯಲ್ಲಿ ತೀಮಾರ್ನಿಸಲಾಗುತ್ತದೆ. ಸಂಘಗಳ ಅಭಿವೃದ್ಧಿ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಮಾತನಾಡಿ, ಸಹಕಾರಿ ಸಂಘಗಳಲ್ಲಿ ರಾಜಕೀಯ ಮಾಡಿದರೆ ಯಾರೂ ಉದ್ಧಾರವಾಗಲ್ಲ. ಗುಣಮಟ್ಟದ ಹಾಲು ನೀಡುವ ಮೂಲಕ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ವೇಮಗಲ್ ಡೇರಿ ಅಧ್ಯಕ್ಷ ವಿ.ಎಂ.ಶ್ರೀನಿವಾಸ್, ವಿಸ್ತರಣಾಧಿಕಾರಿ ಸಮೀರ್ ಪಾಷಾ, ತಾಲೂಕು ಗ್ಯಾರಂಟಿಗಳ ಯೋಜನೆಗಳ ಅಧ್ಯಕ್ಷ ವಿ.ಎಂ ಮುನಿಯಪ್ಪ, ಖಾಜಿಕಲ್ಲಹಳ್ಳಿ ಮುನಿರಾಜ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಂಜಯ್ ಕುಮಾರ್ ಇದ್ದರು.
ಕಾಂಗ್ರೆಸ್ ಡೇರಿನಾ?
ಕಾರ್ಯಕ್ರಮಕ್ಕೂ ಮುನ್ನ ಗ್ರಾಪಂ ಮಾಜಿ ಸದಸ್ಯರಾದ ವಿ.ಎಂ. ರಮೇಶ್, ಬಿ.ನಾರಾಯಣ ಮೂರ್ತಿ ಇತರೆ ಮುಖಂಡರು ಇದು ಕಾಂಗ್ರೆಸ್ ಡೇರಿ ಕಾರ್ಯಕ್ರಮವಾ?, ರೈತರ ಡೇರಿಯಾ?, ಉದ್ಘಾಟನೆ ಫಲಕ ಮತ್ತು ಪತ್ರಿಕೆ ಬರೀ ಕಾಂಗ್ರೆಸ್ನವರ ಹೆಸರುಗಳನ್ನೇ ತುಂಬಿದ್ದೀರಿ ಬೇರೆ ಯಾರೂ ಈ ಡೇರಿಗೆ ಅಭಿವೃದ್ಧಿ ಕೆಲಸ ಮಾಡಿಲ್ಲವೇ?, ಸಂಸದ ಮಲ್ಲೇಶ್ಬಾಬು ಹೆಸರನ್ನಾದರೂ ಹಾಕಬಹುದಿತ್ತಲ್ಲವೇ?. ಎಂಎಲ್ಎ, ಎಂಎಲ್ಸಿಗಳ ಹೆಸರು ಹಾಕುವ ಅವಶ್ಯ ಏನಿತ್ತು ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡೇರಿ ಅಧ್ಯಕ್ಷ ಶ್ರೀನಿವಾಸ ಅವರು, ಸಭೆ ನಡೆಸಿ ಎಲ್ಲ ತೀಮಾರ್ನ ತೆಗೆದುಕೊಳ್ಳಲಾಗಿದೆ. ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಎಂ.ಮಲ್ಲೇಶ್ ಬಾಬು ಅವರ ಹೆಸರನ್ನು ಹಾಕಿಸಲು ಸೂಚಿಸಿದರು. ಇದಕ್ಕೆ ಕೊತ್ತೂರು ಮಂಜುನಾಥ್ ಅವರು ಸಹಕಾರ ಸಂಘಗಳಿಗೆ ಯಾವುದೇ ಪ್ರೊಟೊ ಕಾಲ್ ಬರುವುದಿಲ್ಲ. ವಿಶ್ವಾಸಕ್ಕೆ ಅವರು ಹೆಸರುಗಳನ್ನು ಹಾಕಬಹುದು. ಅವರ ಹೆಸರನ್ನು ಸಹ ಹಾಕಲಿ ನಮಗೇನು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
220 ಕೋಟಿ ರೂ. ವೆಚ್ಚದಲ್ಲಿ ಎಂವಿಕೆ ಡೇರಿ
ಕೋಮುಲ್ ರಚನೆಯಾದ ನಂತರ ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ಎಂವಿಕೆ ಡೇರಿ, ಹಾಲು ಉತ್ಪಾದಕರ ಮಕ್ಕಳಿಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ವರ್ಷದಲ್ಲಿ ಮೂರು ಬಾರಿ ರಾಸುಗಳಿಗೆ ವಿಮೆ ಸೌಲಭ್ಯ, ಪ್ರತಿಯೊಂದು ಹಳ್ಳಿಯಲ್ಲಿ ಸಂಘ ರಚನೆ ಮಾಡಿ ಮುಂದಿನ ವರ್ಷದೊಳಗೆ ಕನಿಷ್ಠ 10 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.