ಶುಶ್ರೂಷಕಿಯರ ಸೇವೆ ಅವಿಸ್ಮರಣೀಯ

244
Published on

ಹೊಳೆನರಸೀಪುರ: ತಾಯಿ ಹೃದಯದಿಂದ ಆರೋಗ್ಯ ಸೇವೆ ಸಲ್ಲಿಸುವ ಶುಶ್ರೂಷಕಿಯರ ಕರ್ತವ್ಯ ಅವಿಸ್ಮರಣೀಯ. ಅವರ ಸೇವೆಯಿಂದ ಲಕ್ಷಾಂತರ ಜನರು ಮರುಜೀವ ಪಡೆದಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಧನಶೇಖರ್ ಶ್ಲಾಘಿಸಿದರು.


ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಫ್ಲಾರೆನ್ಸ್ ನೈಟಿಂಗೇಲ್ ಜನ್ಮ ದಿನಾಚರಣೆ ಹಾಗೂ ವಿಶ್ವ ಶುಶ್ರೂಶಕಿಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು


ವೈದ್ಯರು ನೀಡಿದ ಸಲಹೆ, ಸೂಚನೆ ಪಾಲಿಸಿ ಚಿಕಿತ್ಸೆ ನೀಡಿ ರೋಗಿಗಳಿಗೆ ತಾಯಿಯಂತೆ ವೈದ್ಯಕೀಯ ಸೇವೆ ನೀಡುವ ಶುಶ್ರೂಷಕಿಯರ ವೃತ್ತಿ ಅತ್ಯಂತ ಘನತೆ ಹಾಗೂ ಗೌರವ ತಂದು ಕೊಡುವ ವೃತ್ತಿಯಾಗಿದೆ ಎಂದರು.


ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಸೇವೆ ನೀಡಿ ಅವರೆಲ್ಲರಿಗೆ ಮರುಜೀವ ತಂದು ಕೊಟ್ಟ ಫ್ಲಾರೆನ್ಸ್ ನೈಟಿಂಗೇಲ್ ಅವರಿಂದ ಈ ವೃತ್ತಿಗೆ ಅತಿ ಹೆಚ್ಚಿನ ಮಹತ್ವ ಹಾಗೂ ಗೌರವ ಬಂದಿತು ಎಂದರು.


ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶಕುಮಾರ್ ಮಾತನಾಡಿ, ಆಸ್ಪತ್ರೆ, ಪೊಲೀಸ್ ಠಾಣೆಗೆ ಯಾರೂ ಪ್ರೀತಿಯಿಂದ ಬರುವುದಿಲ್ಲ. ಅವರಿಗೆ ಏನಾದರೂ ತೊಂದರೆಯಾದರೆ ಮಾತ್ರ ಬರುತ್ತಾರೆ. ಇಂತಹ ಸಮಯದಲ್ಲಿ ಬಂದವರನ್ನು ಆತ್ಮೀಯವಾಗಿ ಉಪಚರಿಸಿ ನಿಮ್ಮ ತೊಂದರೆ ನಿವಾರಣೆ ಆಗುತ್ತದೆ ಎನ್ನುವಂತಹ ಭರವಸೆ ನೀಡುವ ಸೇವೆಯನ್ನು ನೀಡಬೇಕು. ಶುಶ್ರೂಶಕಿಯರು ರೋಗಿಗಳೊಂದಿಗೆ ಅತ್ಯಂತ ಸಂಮಯದಿಂದ ಇದ್ದು ಉತ್ತಮ ಸೇವೆ ನೀಡದವರನ್ನು ಜನರು ಜೀವನ ಪೂರ್ತಿ ಮರೆಯುವುದಿಲ್ಲ ಎಂದರು.


ಉಪನ್ಯಾಸಕ ರಾಮು, ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯ ಶುಶ್ರೂಶಕಿ ಅಧಿಕಾರಿ ಮಾಲತಿ, ಹಿರಿಯ ಶುಶ್ರೂಶಕಿ ಶಾಂತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net