

ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪರೂಪದ ವ್ಯಕ್ತಿಗಳಲ್ಲಿ ಪತ್ರಕರ್ತ ರವೀಂದ್ರ ಭಟ್ಟ ಸಹ ಒಬ್ಬರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸಂಚಾಲಕ ಡಾ. ಬಸವರಾಜ ಕಲ್ಗುಡಿ ಹೇಳಿದ್ದಾರೆ.
ಬಹುರೂಪಿ ಫೌಂಡೇಷನ್ ಶನಿವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ರಚನೆಯ "ಬರೆಯದ ಕಥೆಗಳು'(ಮಾಧ್ಯಮ ಅನುಭವಗಳು) ಮತ್ತು ಭಾರತಿ ಹೆಗಡೆ ರಚನೆಯ "ಉಪ್ಪಾಗೆ ಹರಳು'ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೌಲ್ಯಯುತ ಕೃತಿ ಬರೆದಿರುವ ಇವರ ವ್ಯಕ್ತಿತ್ವವೂ ಭಿನ್ನವಾದದ್ದು. ಅಣ್ಣ ಮತ್ತು ತಂಗಿ ಆರೋಗ್ಯಕರ ಬೆರವಣಿಗೆ ರೂಪಿಸಿಕೊಂಡಿರುವುದು ಅಭಿನಂದನೀಯ. ಇವರೆಡು ವಿಭಿನ್ನ ಶೈಲಿಯ ಕೃತಿಗಳಾಗಿವೆ. "ಬರೆಯದ ಕಥೆಗಳು' ಕೃತಿಯ ಬೆರವಣಿಗೆಯಲ್ಲಿ ಸಂಕೀರ್ಣತೆ ಇದೆ. ಸೂಕ್ಷ್ಮ, ಪ್ರಜಾಪ್ರಭುತ್ವದ ಪ್ರಜ್ಞೆ ಇದೆ. ಈ ಪುಸ್ತಕ ಎಲ್ಲರನ್ನೂ ಓದಿಸಿಕೊಂಡು ಹೋಗುತ್ತದೆ. ಜನರು ತಮ್ಮ ಜೀವನದಲ್ಲಿ ಹೇಗೆಲ್ಲ ಕಷ್ಟಪಡುತ್ತಾರೆ ಎಂಬುದರ ಬಗ್ಗೆ ಕ್ರೋಡೋಕರಿಸಿದ ಅಂಶಗಳು ಪುಸ್ತಕದಲ್ಲಿವೆ. ಬೆರವಣಿಗೆ ಧಾಟಿಯಲ್ಲಿ ಜ್ಞಾನ ಮತ್ತು ತಿಳಿವಳಿಕೆಯ ಅಂತರ ಬಗ್ಗೆ ಚೆನ್ನಾಗಿ ಚಿತ್ರಿಸಲಾಗಿದೆ. ಈ ಪುಸ್ತಕ ಕನ್ನಡದಲ್ಲಿ ಜನಪ್ರಿಯತೆ ಹೊಂದಲಿದೆ ಎಂದರು.
ಭಾರತಿ ಹೆಗಡೆಯ "ಉಪ್ಪಾಗೆ ಹರಳು' ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿಯಾಗಿದೆ. ಕನ್ನಡದ ಬಹುಮುಖ್ಯ ಕೃತಿಗಳ ಸಾಲಿನಲ್ಲಿ ಇದು ನಿಲ್ಲಲಿದೆ. ಹೆಣ್ಣಿನ ಜಗತ್ತು, ಸಂಕಟ, ಸ್ವಾತಂತ್ರ್ಯ, ಧೀಮಂತಿಕೆ ಮತ್ತು ಸ್ತ್ರೀವಾದಿ ಅಂಶ ಗಮನ ಸೆಳೆಯುತ್ತವೆ. ಕೊನೆಯಲ್ಲಿ ಹೆಣ್ಣಿನ ಸಂಕಷ್ಟದ ಕಥನವೂ ಚಾರಿತ್ರಿಕ ಕಥನವಾಗಿ ಮಾಡಿ ಬಂದಿರುವುದು ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ಎಚ್.ಎನ್. ಆರತಿ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಲೇಖಕಿ ಭಾರತಿ ಹೆಗಡೆ ಮತ್ತಿತರರಿದ್ದರು.
"ಬರೆಯದ ಕಥೆಗಳು' ಪುಸ್ತಕವು ಕನ್ನಡಕ್ಕೆ ಹೊಸ ಬರಹ ಕೊಟ್ಟಿದೆ. ಉಪ ಉತ್ಪನ್ನದ ಕಥೆಗಳನ್ನು ನೀಡಲಾಗಿದೆ. ಕಿರಿದಾದ ಕಥೆಗಳಲ್ಲಿ ಹಿರಿದಾದ ಅರ್ಥಗಳಿವೆ. ನೀತಿ ಕೂಡ ಹೊಂದಿದ್ದು, ಸರಳವಾಗಿ ನಿರೂಪಿಸಲಾಗಿದೆ.
| ಡಾ.ವಸುಂಧರಾ ಭೂಪತಿ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ.