

ತಿ.ನರಸೀಪುರ: ಆಸ್ಪತ್ರೆಗಳಲ್ಲಿ ವೈದ್ಯರು ನಿರ್ದೇಶಿಸಿದ ಚಿಕಿತ್ಸಾ ಸೂತ್ರಗಳನ್ನು ಜಾರಿಗೆ ತರುವ ದಾದಿಯರ ನಸಿರ್ಂಗ್ ಸೇವೆ ನಿಜಕ್ಕೂ ಅವಿಸ್ಮರಣೀಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಷ್ ಪ್ರಸಂಸೆ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದ ಅವರು ಅಪಘಾತ, ತೀವ್ರನಿಗಾ ಘಟಕ, ಶಸ್ತ್ರಚಿಕಿತ್ಸೆಮ ಮಕ್ಕಳ ವಾರ್ಡು, ಹೆರಿಗೆ ವಿಭಾಗ, ಹೃದಯ ಚಿಕಿತ್ಸೆ ಇನ್ನಿತರ ವೈದ್ಯಕೀಯ ವಿಭಾಗಗಳಲ್ಲಿ ಶ್ರುಶ್ರೂಷೆ ವಿಭಾಗದ ಕಾರ್ಯನಿರ್ವಹಣೆಗೆ ಆದ್ಯತೆಯಿರುತ್ತದೆ. ವಿವಿಧ ಚಿಕಿತ್ಸೆಯ ರೂಪುರೇಷೆಗಳನ್ನು ವೈದ್ಯರು ನಿರ್ಧರಿಸಿದರೂ, ಅದರ ಸಮರ್ಪಕ ಅನುಷ್ಠಾನ ಸಾಧ್ಯವಾಗುವುದು ಮಾತ್ರ ನಿಸ್ವಾರ್ಥ ಸೇವೆಗೈಯ್ಯುವ ದಾದಿಯರಿಂದಲೇ ಎಂದು ಬಣ್ಣಿಸಿದರು.
ಜನ ದಾದಿಯರನ್ನು ಅಪರೂಪದ ವೃತ್ತಿ ಧರ್ಮದವರು ಹಾಗೂ ದೇವರಂತೆ ಕಾಣುತ್ತಾರೆ. ಕೋವಿಡ್ ಸಂದರ್ಭ ದಾದಿಯರ ಸೇವೆ ಮಾನವ ಜಗತ್ತು ಒಪ್ಪಿಕೊಳ್ಳುವುದರ ಜತೆಗೆ ಕೊಂಡಾಡಿತ್ತು. ರೋಗಿಗಳೊಂದಿಗೆ ವಿಶ್ವಾಸ ಗಳಿಸುವುದು ದಾದಿಯರ ಕಲೆಯಾಗಿದೆ. ಜಾತಿ, ಧರ್ಮ, ಮತಗಳ ಆಧಾರದಲ್ಲಿ ದಾದಿಯರನ್ನು ಜನ ಪ್ರೀತಿಸುತ್ತಿಲ್ಲ. ಅವರ ನಿಸ್ವಾರ್ಥ ಸೇವೆಗಳನ್ನು ಪ್ರೀತಿಸಲಾಗುತ್ತಿದೆ. ದಾದಿಯರ ಸೇವೆಯಿಂದ ವೈದ್ಯರ ಕರ್ತವ್ಯ ಪರಿಪೂರ್ಣವಾಗುವುದು. ಮಹಾನ್ ಸೇವಕಿ ಫ್ಲೋರೆನ್ಸ್ ನೈಟಿಂಗೇಲ್ ಹೆಸರಿನಲ್ಲಿ ದಾದಿಯರನ್ನು ಸ್ಮರಿಸುವ ಈ ದಿನ ಬಹಳ ಮಹತ್ವದ್ದು ಎಂದು ಅವರು ಹೇಳಿದರು.
ತಾಲೂಕು ಅರೋಗ್ಯಾಧಿಕಾರಿ ಡಾ.ರವಿಕುಮಾರ್, ಹಿರಿಯ ಶುಶ್ರೂಷಕರಾದ ಮಂಗಳಮ್ಮ, ಯಶೋದಾ, ಜಯಂತಿ, ಗೀತಾ, ತುಳಸಿ, ಕಿರಿಯ ಶುಶ್ರೂಷಕರಾದ ಶ್ವೇತಾ, ಭಾಗ್ಯಾ, ಮಂಜುಳಾ, ಅಶ್ವಿನಿ, ಆಶಾ, ನಿರ್ಮಲಾ, ಸಮಾಜ ಸೇವಕ ನಿಲಸೋಗೆ ಉಮೇಶ್, ಗ್ರಾ.ಪಂ.ಸದಸ್ಯ ಚಿದರವಳ್ಳಿ ಮಹೇಶ್, ಅಯ್ಯಪ್ಪ ಸಿದ್ದಲಿಂಗಸ್ವಾಮಿ, ಹೊಸಪುರ ಸಿದ್ದು, ನಿಲಸೋಗೆ ಕಲ್ಯಾಣ್ ಹಾಗೂ ಇನ್ನಿತರರು ಇದ್ದರು.