

* ವೈಯಕ್ತಿಕ ವರ್ಚಸ್ಸಿಗೆ ಸವಾಲಾದ ಚನ್ನಪಟ್ಟಣ ಕ್ಷೇತ್ರ
* ಸೋಲನ್ನು ಸರಿದೂಗಿಸುವ ಸವಾಲು
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇವಲ 6 ತಿಂಗಳ ಅವಧಿಯಲ್ಲಿ ಎರಡನೇ ದೊಡ್ಡ ಟಾಸ್ಕ್ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯೂ ಮಹತ್ವವೇ ಆದರೂ, ಚನ್ನಪಟ್ಟಣ ಕ್ಷೇತ್ರ ವೈಯಕ್ತಿಕ ವರ್ಚಸ್ಸಿಗೆ ಸವಾಲಾಗಿರುವ ಕ್ಷೇತ್ರವಾಗಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಸೋಲು ಆಘಾತ ನೀಡಿದ್ದು, ಚನ್ನಪಟ್ಟಣ ಉಪಚುನಾವಣೆ ಮೂಲಕ ಈ ಸೋಲನ್ನು ಗೆಲುವಿನ ಮೂಲಕ ಸರಿದೂಗಿಸುವ ಸವಾಲು ಎದುರಾಗಿದೆ.
ಸೋಲು ಕಾಡಿದೆ:
ಲೋಕಸಭೆ ಚುನಾವಣೆ ಸೋಲು ಡಿ.ಕೆ. ಸಹೋದರರನ್ನು ಕಾಡಿದೆ. ಅನಿರೀತವಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿ ಜಾಣ ನಡೆ ಅನುಸರಿಸಿತು. ಇದರ ಹೊರತಾಗಿಯೂ ರಾಜಕೀಯದ ಎಲ್ಲ ತಂತ್ರಗಾರಿಕೆ ಬಳಕೆ ಮಾಡಿ, ಮತದಾರರ ಮನಮುಟ್ಟುವ ಡಿ.ಕೆ. ಸಹೋದರರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಈ ಸೋಲು ಕಾಂಗ್ರೆಸಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಆಘಾತ ನೀಡಿತು. ಆದರೆ, ಚನ್ನಪಟ್ಟಣ ಉಪಚುನಾವಣೆ ಮೂಲಕ ಆ ಸೋಲಿನಿಂದ ಹೊರ ಬರಲು ದೊಡ್ಡ ಅವಕಾಶ ಒದಗಿ ಬಂದಿದೆ.
ಆಸೆ ಮೂಡಿಸಿದ ಮತಗಳಿಕೆ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡರೂ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತಗಳಿಕೆ ಚನ್ನಪಟ್ಟಣದಲ್ಲಿ ಗೆಲ್ಲುವ ಆಸೆ ಮೂಡಿಸಿತು. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ 1,06,971 ಮತಗಳನ್ನು ಪಡೆದುಕೊಂಡರೆ, ಡಿ.ಕೆ.ಸುರೇಶ್ 85,375 ಮತಗಳನ್ನು ಪಡೆದುಕೊಂಡರು. ಇದು ಹಿಂದಿನ ಮೂರು ಚುನಾವಣೆಗಳಿಗಿಂತ ಗಳಿಸಿದ ಹೆಚ್ಚಿನ ಮತಗಳಾಗಿವೆ.
ಗೆಲ್ಲುವ ಹಠ:
ಸೋಲಿನ ನಂತರ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಎದುರಾಗುವುದು ನಿಶ್ಚಿತವಾಗುವುದನ್ನು ಅರಿತ ಡಿಸಿಎಂ ಡಿ.ಕೆ ಶಿವಕುಮಾರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಟ ಆರಂಭಿಸಿದರು. 5 ತಿಂಗಳಲ್ಲಿ ಸಾಕಷ್ಟು ಬಾರಿ ಕ್ಷೇತ್ರದಲ್ಲಿ ಸಂಚಾರ ಮಾಡಿ, ಇಡೀ ಆಡಳಿತ ಯಂತ್ರವನ್ನೇ ಚನ್ನಪಟ್ಟಣಕ್ಕೆ ಕರೆತರುವ ಮೂಲಕ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಸಾವಿರಾರು ನಿವೇಶನ ಹಂಚಿಕೆಗೆ ಸಿದ್ದತೆ, ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮಾತ್ರವಲ್ಲದೇ, ಜಿಲ್ಲಾಡಳಿತವನ್ನು ಈ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿಯೂ ಯಶಸ್ವಿ ಆಗುವ ಮೂಲಕ ಗೆಲ್ಲುವ ಹಠವನ್ನು ತೊಟ್ಟಿದ್ದಾರೆ.
ನಡೆಯಲಿದೆ ಆಪರೇಷನ್ ಹಸ್ತ
ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಜೆಡಿಎಸ್&ಬಿಜೆಪಿಯ ಹಲವು ಮುಖಂಡರನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ಡಿ.ಕೆ. ಸಹೋದರರು ಯಶಸ್ವಿ ಆಗಿದ್ದರು. ಇದೇ ತಂತ್ರವನ್ನು ಈ ಬಾರಿಯೂ ಮಾಡಲು ವೇದಿಕೆ ಸಿದ್ದವಾಗಿದೆ. ಈಗಾಗಲೇ ಜೆಡಿಎಸ್ & ಬಿಜೆಪಿಯ ಹಲವು ನಾಯಕರ ಸಂಪರ್ಕವನ್ನು ಸಾಧಿಸಲಾಗಿದ್ದು, ಶ್ರೀವೇ ಹಲವರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
ಡಿಕೆಸು ಸ್ಪರ್ಧೆಗೆ ಒತ್ತಡ
ಸದ್ಯದ ಚನ್ನಪಟ್ಟಣ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಾಗಿಲ್ಲ. ಒಂದೆಡೆ ಬಿಎಂಐಪಿಸಿಐ ಅಧ್ಯಕ್ಷ ರುನಂದನ್ ರಾಮಣ್ಣ ಅವರ ಹೆಸರು ಮುಂಚೂಣಿಯಲ್ಲಿದ್ದರೆ, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ವರಿಷ್ಠರು ಸೂಚಿಸಿದರೆ ಸ್ಫರ್ಧೆಗೆ ಸಿದ್ದವಾಗಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರ ಮನದಲ್ಲಿ ಇರುವ ಏಕೈಕ ಹೆಸರು ಡಿ.ಕೆ.ಸುರೇಶ್. ಪ್ರತಿ ದಿನ ಚನ್ನಪಟ್ಟಣದಿಂದ ಕಾರ್ಯಕರ್ತರ ನಿಯೋಗ ತೆರಳಿ ಸ್ಪರ್ಧೆಗೆ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ, ಡಿಕೆಸು ಸ್ಪರ್ಧೆ ನಿರಾಕರಿಸುತ್ತಿದ್ದಾರೆ. ಒಂದು ವೇಳೆ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಿದರೆ, ಅಣ್ಣನ ಎರಡನೇ ಟಾಸ್ಕ್ನ ಗೆಲುವು ತಂದು ಕೊಡುವ ಅವಕಾಶ ಹೆಚ್ಚಿವೆ.