ಬಿಡಾಡಿ ಕುದುರೆಗಳ ಹಾವಳಿ

Oplus_131072
ದೇವಿರಮ್ಮನಹಳ್ಳಿ ರೈತರ ಜಮೀನಿಗೆ ಲಗ್ಗೆ ಇಟ್ಟಿರುವ ಬಿಡಾಡಿ ಕುದುರೆಗಳು.
Published on

ನಂಜನಗೂಡು: ಪಟ್ಟಣದ ದೇವಿರಮ್ಮನಹಳ್ಳಿ ಬಡಾವಣೆಯಲ್ಲಿ ಬಿಡಾಡಿ ಕುದುರೆಗಳ ಹಾವಳಿ ಮಿತಿಮೀರಿದೆ ಎಂದು ದೇವಿರಮ್ಮನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಹಾಗೂ ನಗರಸಭೆ ವ್ಯಾಪ್ತಿಗೆ ಸೇರಿದ ದೇವಿರಮ್ಮನಹಳ್ಳಿ ಬಡಾವಣೆಯಲ್ಲಿ ಬಿಡಾಡಿ ಕುದುರೆಗಳ ಹಾವಳಿಯಿಂದ ವಾಹನ ಸವಾರರು ಭಯದಲ್ಲಿ ದಿನನಿತ್ಯ ಸಂಚರಿಸುವ ಪರಿಸ್ಥಿತಿ ತಲೆದೋರಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ.

ರೈತರ ಬೆಳೆ ನಾಶ: ಪ್ರತಿದಿನ ರಾತ್ರಿ ಸಮಯದಲ್ಲಿ ರೈತರ ಜಮೀನುಗಳಿಗೆ ಬಿಡಾಡಿ ಕುದುರೆಗಳು ಲಗ್ಗೆ ಇಡುತ್ತವೆ. ಜಮೀನುಗಳಲ್ಲಿ ಹಾಕಿದ ತರಕಾರಿ, ಕಬ್ಬು, ಭತ್ತ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಜಮೀನಿಗೆ ಕಾವಲು ಕಾಯಲು ಸ್ವಲ್ಪ ತಡವಾದರೂ ಸಾಕು , ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳು ಕುದುರೆಗಳ ಪಾಲಾಗುತ್ತಿದ್ದು, ಇಡೀ ರಾತ್ರಿ ಕಣ್ಣಿಗೆ ನಿದ್ದೆ ಮಾಡದೆ ಬಿಡಾಡಿ ಕುದುರೆಗಳನ್ನು ಕಾವಲು ಕಾಯುವುದೇ ಒಂದು ದೊಡ್ಡ ಸಾಹಸವಾಗಿದೆ ಎಂದು ದೇವಿರಮ್ಮನಹಳ್ಳಿ ಗ್ರಾಮದ ಗಣೇಶ್ ಅಳಲು ತೋಡಿಕೊಂಡಿದ್ದಾರೆ.

ಕೆಲವು ಸಮಯಗಳಲ್ಲಿ ತರಕಾರಿ ಬೆಳೆಗಳನ್ನು ನಾಟಿ ಮಾಡಿ ಮನೆಗೆ ಬರುವಷ್ಟರಲ್ಲಿ ಎಲ್ಲವನ್ನು ತುಳಿದು ನಾಶ ಮಾಡಿ ತೆರಳುತ್ತಿದ್ದು ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಬಿಡಾಡಿ ಕುದುರೆಗಳ ನಿಯಂತ್ರಣ ಮಾಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net