

ಹಳಿಯಾಳ: ಪರಿಶಿಷ್ಟ ಜಾತಿಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಹಳಿಯಾಳದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ಯಲ್ಲಾಪುರ ನಾಕಾದಲ್ಲಿಯ ಡಾ. ಬಾಬಾಸಾಹೇಬ ಅಂಬೇಡ್ಕರ್ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮುಖ್ಯ ರಸ್ತೆ, ಮುಖ್ಯ ಮಾರುಕಟ್ಟೆ ಮಾರ್ಗವಾಗಿ ಸ್ಥಳೀಯ ಶಾಸಕ ಆರ್. ವಿ. ದೇಶಪಾಂಡೆ ಅವರ ನಿವಾಸದ ಮುಂಭಾಗದಲ್ಲಿ ತಮಟೆ ಬಾರಿಸುವ ಮೂಲಕ ಪ್ರತಿಭಟಿಸಲಾಯಿತು.
ಬಳಿಕ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ ಕಳೆದ 30 ವರ್ಷಗಳಿಂದಲೂ ಪರಿಶಿಷ್ಟ ಜಾತಿಯಲ್ಲಿರುವ 101 ಆಯಾ ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಆಗಬೇಕೆಂದು ಹೋರಾಟ ನಡೆಸುತ್ತ ಬರಲಾಗಿದೆ. ಈ ಹೋರಾಟದ ಉದ್ದೇಶ ಕೇವಲ ಪರಿಶಿಷ್ಟ ಜಾತಿಯಲ್ಲಿರುವ ಬಲಾಢ್ಯ ಜಾತಿಗಳು ಅಂದರೆ ಶೈಕ್ಷಣಿಕ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯ ಇರುವ ಜಾತಿಗಳು ಮಾತ್ರ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ ಇತರೆ ಹಿಂದುಳಿದ ಜಾತಿಗಳಿಗೆ ಅನ್ಯಾಯ ಆಗಬಾರದೆಂದು ಪರಿಶಿಷ್ಟ ಜಾತಿಯ ಕಟ್ಟಕಡೆಯ ಶೋಷಿತ ಸಮಾಜಕ್ಕೆ ಮೀಸಲಾತಿಯ ಲಾಭ ಸಿಗಬೇಕೆನ್ನುವ ಉದ್ದೇಶದಿಂದ ನಿರಂತರ ಹೋರಾಟ ನಡೆಸುತ್ತ ಬರಲಾಗಿದೆ. ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ 1ರಂದು 7 ಸದಸ್ಯರ ಪೀಠ ದೇಶದಲ್ಲಿರುವಂತಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳ ಮೀಸಲಾತಿ ಜಾರಿಗೊಳಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸಿದ 24 ಗಂಟೆಯೊಳಗೆ ಮೀಸಲಾತಿ ವರ್ಗೀಕರಣ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, 4 ತಿಂಗಳು ಕಳೆದರೂ ಈವರೆಗೂ ನಿರ್ಧಾರ ಕೈಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿನ ಮಾದಿಗ, ಚಲವಾದಿ, ಡೋರ, ಚಮಗಾರ, ಸಮಗಾರ ಹಾಗೂ ಹುಲಸ್ವಾರ ಸಮುದಾಯಗಳ ಮುಖಂಡರು, ಹನುಮಂತ ಚಿನಗಿನಕೊಪ್ಪ, ಯಲ್ಲಪ್ಪ ಹೊನ್ನೋಜಿ, ಹನುಮಂತ ಚಲವಾದಿ, ರಾಜು ಮೇತ್ರಿ, ವಿಲಾಸ ಕಣಗಲಿ, ಹನುಮಂತ ಮೇತ್ರಿ, ಪೋಮಣ್ಣಾ ದಾನಪ್ಪನವರ, ಆನಂದ ಮೇತ್ರಿ, ಎಚ್.ಬಿ. ಪರಶುರಾಮ, ಬಸವರಾಜ ಮೇತ್ರಿ, ಜ್ಞಾನೇಶ್ವರ ಗಜಾಕೋಶ, ಕಲ್ಲಪ್ಪ ಖಾದ್ರೋಳ್ಳಿ, ಗುರುನಾಥ ಮೇತ್ರಿ, ಪಾಂಡು ಚಲವಾದಿ, ಬಸವರಾಜ ನಾಗಪ್ಪ ಮೇತ್ರಿ ಇದ್ದರು.