ಗಿಡ-ಗಂಟಿ ರಸ್ತೆಯಲ್ಲಿ ಸವಾರರ ಪರದಾಟ

gida gante2.
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಿಲ್ಲೆಯ ಪ್ರಮುಖ ರಸ್ತೆಗಳು ಸೇರಿ ತಾಲೂಕು, ಗ್ರಾಮ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ವಾಹನ ಸವಾರರು ನಿತ್ಯವೂ ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.

ರಾಮನಗರ ಜಿಲ್ಲಾ ಕೇಂದ್ರಕ್ಕೆ ಕನಕಪುರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಕೇಂದ್ರಗಳಿಂದಲೂ ಜಿಲ್ಲಾಮಟ್ಟದ ಪ್ರಮುಖ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಇಂತಹ ಪ್ರಮುಖ ಸಂಪರ್ಕ ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ತಿರುವುಗಳಲ್ಲಿ ಎದುರಿನಿಂದ ವಾಹನ ಬರುವುದು ತಿಳಿಯದಿರುವುದರಿಂದ ಅಪಘಾತ ಸಂಭವಿಸುವ ಭಯದಲ್ಲೇ ಓಡಾಡಬೇಕಿದೆ.

ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆ ಮಾಡಬೇಕಿದೆ. ಆದರೆ, ಆಳೆತ್ತರಕ್ಕೆ ಗಿಡ ಗಂಟಿಗಳು ಬೆಳೆದು ನಿಂತಿದ್ದರೂ ತೆರವಿಗೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.

ರಸ್ತೆ ತಿರುವು

ಒಂದೊಂದು ರಸ್ತೆಯಲ್ಲೂ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಜಿಲ್ಲಾ, ತಾಲೂಕು, ಗ್ರಾಮ ರಸ್ತೆಗಳಲ್ಲಿ ಹೆಚ್ಚಿನ ತಿರುವುಗಳಿದ್ದು, ಗಿಡ&ಗಂಟಿಗಳು ಬೆಳೆದಿರುವ ಕಾರಣ ಎದುರುಗಡೆಯಿಂದ ಬರುವ ವಾಹನ ಕಾಣದೆ ಸವಾರರನ್ನು ಅಪಾಯಕ್ಕೆ ದೂಡುತ್ತಿವೆ.

ವನ್ಯ ಜೀವಿಗಳ ಉಪಟಳ

ಜಿಲ್ಲೆಯಲ್ಲಿ ಆನೆ ಸೇರಿ ಕರಡಿ, ಚಿರತೆ ಇನ್ನಿತರ ವನ್ಯ ಪ್ರಾಣಿಗಳ ಉಪಟಳವಿದೆ. ಆಹಾರ ಅರಸುತ್ತಾ ರಸ್ತೆಗಳನ್ನು ದಾಟುತ್ತಿರುತ್ತವೆ. ಇದರಿಂದ ಗಿಡ-ಗಂಟಿ ಮರೆಯಲ್ಲಿ ವನ್ಯ ಪ್ರಾಣಿಗಳು ವಾಹನ ಸವಾರರಿಗೆ ಕಾಣ ಅಡ್ಡಬಂದು ಅಪಘಾತವಾಗುವ, ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚು. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಡೇರಿಗಳಿಗೆ ಬೆಳಗ್ಗೆ&ಸಂಜೆ ವೇಳೆಯಲ್ಲಿ ಹಾಲು ಹಾಕಲು ಅನೇಕ ಗ್ರಾಮಗಳಲ್ಲಿ ರೈತರು ಹೋಗಬೇಕಿದೆ. ಇಂತಹ ಸಂದರ್ಭದಲ್ಲಿ ರೈತರು ಕಾಡು ಪ್ರಾಣಿಗಳ ಭಯದಲ್ಲಿ ಸಂಚರಿಸಬೇಕಿದೆ.

ಈಗಾಗಲೇ ಸಾಕಷ್ಟು ವಾಹನ ಸವಾರರು, ಸಾರ್ವಜನಿಕರಿಗೆ ಕಾಡು ಪ್ರಾಣಿಗಳು ರಸ್ತೆಯಲ್ಲಿ ಅಡ್ಡಬಂದು ಅದರ ಬಿಸಿ ಅನುಭವಿಸಿದ್ದಾರೆ. ರಸ್ತೆ ಕಿರಿದಾಗಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿವೆ. ವಾಹನ ಸವಾರರಿಗೆ ರಸ್ತೆಗಳು ಭಯ ಮೂಡಿಸಿವೆ.

ಸಮಸ್ಯೆ ಉಂಟಾಗಿರುವ ರಸ್ತೆಗಳು

ಕನಕಪುರ-ರಾಮನಗರ ರಸ್ತೆ, ರಾಮನಗರ&ಲ್ಮಪುರ&ಮಾಗಡಿ ರಸ್ತೆ, ರಾಮನಗರ- ಜಾಲಮಂಗಲ - ಹ್ಯಾಂಡ್​ ಪೋಸ್ಟ್​ ರಸ್ತೆ, ಬಿಡದಿ - ಹಾರೋಹಳ್ಳಿ ರಸ್ತೆ, ಚನ್ನಪಟ್ಟಣ ಹಲಗೂರು ರಸ್ತೆ, ಎಸ್​.ಆರ್​.ಎಸ್​.ಬೆಟ್ಟ - ಚನ್ನಪಟ್ಟಣ, ಬನ್ನಿಕುಪ್ಪೆ - ಅರಳಾಳುಸಂದ್ರ, ದೊಡ್ಡಗಂಗವಾಡಿ - ತಾವರೆಕೆರೆ, ಅವ್ವೇರಹಳ್ಳಿ - ತೆಂಗಿನಕಲ್ಲು, ಹರೀಸಂದ್ರ - ಮಂಚನಬೆಲೆ, ಬನ್ನಿಕುಪ್ಪೆ ಕಾಡನಕುಪ್ಪೆ ರಸ್ತೆ ಸೇರಿ ಅನೇಕ ಪ್ರಮುಖ ರಸ್ತೆಗಳಲ್ಲಿ ಗಿಡ&ಗಂಟಿ ಬೆಳೆದು ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡಿವೆ.

ತರಕಾರಿ, ರೇಷ್ಮೆ ಮಾರುಕಟ್ಟೆಗೆ ಬೆಳಗಿನ ಜಾವ, ರಾತ್ರಿ ವೇಳೆಯಲ್ಲಿ ರೈತರು ದ್ವಿಚಕ್ರ ವಾಹನಗಳಲ್ಲೇ ಹೋಗಿ ಬರುತ್ತಾರೆ. ಕಾಡು ಪ್ರಾಣಿಗಳ ಉಪಟಳ ಇರುವ ಕಾರಣ ರಸ್ತೆಯ ಇಕ್ಕೆಲಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳ ಮಧ್ಯೆ ಸಂಚರಿಸಲು ಭಯಪಡುವಂತಾಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆಗೆ ಮುಂದಾಗಬೇಕು.

> ಎಲ್​.ಎಸ್​. ಸ್ವಾಮಿ, ಲಕ್ಕೋಜನಹಳ್ಳಿ.

ಮೊದಲು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ನಂತರ ರಸ್ತೆ ಅಕ್ಕಪಕ್ಕದ ಗಿಡ ಗಂಟಿ ತೆರವು ಮಾಡಿ ಸರ್ಕಾರದ ನಿಯಮಾನುಸಾರ ಹಂತ ಹಂತವಾಗಿ ಇಲಾಖೆ ರಸ್ತೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಿದೆ.

ಶಂಕರ್​, ಎಇಇ, ಲೋಕೋಪಯೋಗಿ ಇಲಾಖೆ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net