

ಸಿ.ಎ. ಮುರಳೀಧರ್ ಗೌರಿಬಿದನೂರು
ಬಡ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಹಾಗೂ ಪ್ರತಿಷ್ಠಿತ ಬಡಾವಣೆಗಳಿರುವ ವಾರ್ಡ್ ಇದು. ಈ ವಾರ್ಡ್‌ಗೆ ನೀರು ಪೂರೈಸುವುದೇ ಸವಾಲಿನ ವಿಷಯವಾಗಿದೆ. ಅಧಿಕ ಜನಸಂಖ್ಯೆ ಹೊಂದಿರುವ ಈ ವಾರ್ಡ್‌ನಲ್ಲಿ ಕನಿಷ್ಠ ಓವರ್‌ಹೆಡ್ ಟ್ಯಾಂಕ್ ಇಲ್ಲ. ಜತೆಗೆ ದಶಕಗಳಿಂದ ಕಾಯುತ್ತಿದ್ದರೂ ಬಡವರ ಸೂರಿನ ಕನಸು ನನಸಾಗಿಲ್ಲ!. ಇದು ನಗರಸಭೆ ವಾರ್ಡ್ 1ರ ಚಿತ್ರಣ.
ಬಡವರಿಗೆ ಆಶ್ರಯದ ಆಶಯ
ನಾಗಯ್ಯರೆಡ್ಡಿ ಬಡಾವಣೆಯಲ್ಲಿ ಆಶ್ರಯ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಯ್ಕೆಯಾಗಿರುವ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆಶ್ರಯ ಯೋಜನೆಯಡಿ 350ಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಿದ್ದು, ಈ ಪೈಕಿ 200 ಮಂದಿ ಮನೆ ನಿರ್ಮಿಸಿಕೊಂಡಿದ್ದಾರೆ. ಉಳಿದ 150 ಮಂದಿ ಆರ್ಥಿಕ ಸಮಸ್ಯೆಯಿಂದ ಮನೆ ನಿರ್ಮಿಸಿಕೊಳ್ಳದೆ ದಶಕಗಳಿಂದ ವಸತಿ ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ.
ಕೊಳಚೆ ನಿರ್ಮೂಲನಾ ಮಂಡಳಿಯಿಂದ 20 ವರ್ಷಗಳ ಹಿಂದೆ 254 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಅವು ಈಗ ಶಿಥಿಲಾವಸ್ಥೆಗೆ ತಲುಪಿವೆ. ಬಡವರು ಅನಿವಾರ್ಯವಾಗಿ ಅದೇ ಮನೆಗಳಲ್ಲಿ ವಾಸಿಸುತ್ತಿದ್ದಾರೆ. 2 ದಶಕಗಳಿಂದೀಚೆಗೆ ಬಡವರಿಗೆ ಒಂದೇ ಒಂದು ಮನೆ ಹಾಗೂ ನಿವೇಶನ ಮಂಜೂರು ಮಾಡಿಲ್ಲ. ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ನಡೆಸುತ್ತಿರುವ ಪ್ರಯತ್ನ ಫಲ ನೀಡಿಲ್ಲ.
ಹದಗೆಟ್ಟ ಯುಜಿಡಿ ವ್ಯವಸ್ಥೆ
ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆ ಪಡೆದಿರುವ ಮೊದಲ ಬಡಾವಣೆ ಎಂದರೆ ನಾಗಯ್ಯರೆಡ್ಡಿ ಬಡಾವಣೆ. ಆದರೆ, ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಯುಜಿಡಿ ಲೈನ್‌ಗೆ ಸೆಪ್ಟಿಕ್ ಟ್ಯಾಂಕ್ ಇಲ್ಲದ ಕಾರಣ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ಅಲ್ಲಲ್ಲಿ ಕಟ್ಟಿಕೊಂಡು ಅದನ್ನು ಹೊರತೆಗೆಯಲು ಸಾಧ್ಯವಾಗದೆ ನಗರಸಭೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಓವರ್‌ಹೆಡ್ ಟ್ಯಾಂಕ್ ಇಲ್ಲ
ನಾಗಯ್ಯರೆಡ್ಡಿ ಬಡಾವಣೆಯಲ್ಲಿ ಯುಜಿಡಿ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಇಷ್ಟು ದೊಡ್ಡ ವಾರ್ಡ್‌ನಲ್ಲಿ ಒಂದೇ ಒಂದು ಓವರ್‌ಹೆಡ್ ಟ್ಯಾಂಕ್ ಇಲ್ಲ. ಬಡ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುವ ಬಡಾವಣೆಯಲ್ಲಿ ಮನೆಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಲು ನೀರಿನ ತೊಟ್ಟಿ (ಸಂಪು)ಗಳಿಲ್ಲ. ಎರಡು - ಮೂರು ದಿನಕ್ಕೊಮ್ಮೆ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಬಿಗಡಾಯಿಸಿ ನೀರಿಗಾಗಿ ನಾರಿಯರು ಬೀದಿಕಾಳಗ ನಡೆಸುವುದು ಸಾಮಾನ್ಯವಾಗಿದೆ.
ಇರುವುದು ಒಂದೇ ರಸ್ತೆ
ಬಡಾವಣೆಯ ಮುಖ್ಯರಸ್ತೆ ಮಾತ್ರ ಡಾಂಬರು ಕಂಡಿದೆ. ಉಳಿದವು ಮಣ್ಣಿನ ರಸ್ತೆಗಳಾಗಿವೆ. ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಜನ ಓಡಾಡಲು ಪರದಾಡುವುದು ಸಾಮಾನ್ಯವಾಗಿದೆ. ವಾರ್ಡ್‌ನ ಸ್ವಾಗತ್ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಚರಂಡಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಸ್ವಚ್ಛತೆಯೂ ಮರೀಚಿಕೆಯಾಗಿದೆ.
ಏನೇನು ಬೇಕು?
ಮೊದಲ ಬಾರಿಗೆ ವಾರ್ಡ್ ಸದಸ್ಯೆಯಾಗಿ ಆಯ್ಕೆಯಾಗಿರುವ ರಾಜೇಶ್ವರಿ ಮೈಲಾರಿ ಅವರು ಎಂಬಿಎ ಪದವೀಧರೆಯಾಗಿದ್ದು, ಜನ ವಾರ್ಡ್ ಅಭಿವೃದ್ಧಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಕನಿಷ್ಠ 1 ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು. ಬಡಾವಣೆಯ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿಸಬೇಕು, ಸೂಕ್ತ ಚರಂಡಿ ವ್ಯವಸ್ಥೆ, ಕೊಳಚೆ ನಿರ್ಮೂಲ ಮಂಡಳಿಯಿಂದ ಮನೆಗಳನ್ನು ದುರಸ್ತಿ ಮಾಡಿಸಬೇಕು. ಬಡವರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸೂರು ಕಲ್ಪಿಸಬೇಕು ವಾರ್ಡ್ ನಿವಾಸಿಗಳ ಪ್ರಮುಖ ಬೇಡಿಕೆಗಳಾಗಿವೆ.
ವಾರ್ಡ್ ವ್ಯಾಪ್ತಿ / ಜನಸಂಖ್ಯೆ
ನಾಗಯ್ಯರೆಡ್ಡಿ ಬಡಾವಣೆ, ನಾಗಲಾಂಬಿಕಾ ಬಡಾವಣೆ, ಸ್ವಾಗತ್ ಬಡಾವಣೆ, ಕರೆಕಲ್ಲಹಳ್ಳಿ ಹಳೇ ಊರಿನ ಭಾಗಗಳನ್ನು ಒಳಗೊಂಡಿರುವ ಈ ವಾರ್ಡ್‌ನಲ್ಲಿ 740ಕ್ಕೂ ಹೆಚ್ಚು ಮನೆಗಳಿದ್ದು, 3800ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈ ಪೈಕಿ 2200 ಮತದಾರರಿದ್ದಾರೆ.
ಪುರಸಭೆ ನಗರಸಭೆಯಾಗಿದ್ದರಿಂದ ನಗರ ವಿಸ್ತಾರಗೊಂಡಿದೆ. ಆದರೆ ಅದಕ್ಕೆ ತಕ್ಕಂತೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ನಮ್ಮ ವಾರ್ಡ್ ದೊಡ್ಡದಾಗಿದ್ದು, ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ವಾರ್ಡ್ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು.
- ರಾಜೇಶ್ವರಿ ಮೈಲಾರಿ, ನಗರಸಭೆ ಸದಸ್ಯ
ಎರಡು ದಶಕದ ಹಿಂದೆ ಬಡವರಿಗೆ ಆಶ್ರಯ ಹಾಗೂ ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಿರುವುದನ್ನು ಬಿಟ್ಟರೆ ಬಳಿಕ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಸರ್ಕಾರದಮಟ್ಟದಲ್ಲಿ ಒತ್ತಡ ಹೇರಿ ವಿವಿಧ ಯೋಜನೆಗಳಡಿ ಬಡವರಿಗೆ ಮನೆ ನಿರ್ಮಿಸಿಕೊಡಬೇಕು.
- ಮಂಜುನಾಥ್, ವಾರ್ಡ್ ನಿವಾಸಿ