

ಕಿಕ್ಕೇರಿ: ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ರೈತ ಲಿಂಗರಾಜೇಗೌಡರ ಕೊಟ್ಟಿಗೆಯ ಛಾವಣಿ ಬಿರುಗಾಳಿ ಮಳೆಗೆ ಹಾರಿ ಹೋಗಿದೆ.
ವಾರದಿಂದ ಸುರಿದ ಮಳೆಗೆ ಕೊಟ್ಟಿಗೆ ಗೋಡೆ ತೇವಾಂಶವಾಗಿತ್ತು. ಇತ್ತೀಚೆಗೆ ಬೀಸಿದ ಬಿರುಗಾಳಿಗೆ ಕೊಟ್ಟಿಗೆ ಛಾವಣಿ ಹಾರಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಮಳೆಗಾಳಿಗೆ ಬೆದರಿವೆ. ಪಕ್ಕದಲ್ಲಿ ತೆಂಗಿನಕಾಯಿ ಸಂಗ್ರಹಣೆಗೆ ನಿರ್ಮಿಸಿಕೊಂಡಿದ್ದ ಶೆಡ್ ಶೀಟುಗಳು ಕೂಡ ಹಾರಿ ಹೋಗಿವೆ. ಪರಿಣಾಮ ಕೊಬ್ಬರಿ, ತೆಂಗಿನಕಾಯಿ ಮಳೆಯಲ್ಲಿ ನೆನೆದು ಗಾಳಿ ಕೊರತೆಯಿಂದ ಬೂಸ್ಟ್ ಹಿಡಿಯುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.