

ಕೊಳ್ಳೇಗಾಲ: ಹುಲಿಯು ಆಹಾರ ಸರಪಳಿಯಲ್ಲಿ ಅಗ್ರಸ್ಥಾನದ ಪರಭಕ್ಷಕ ಪ್ರಾಣಿಯಾಗಿದ್ದು ಕಾಟಿ, ಕಡವೆ, ಜಿಂಕೆ ಇತರ ದೊಡ್ಡ ಗಾತ್ರದ ಸಸ್ಯಹಾರಿ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಪರಿಸರ ಮತ್ತು ಜೀವವೈವಿಧ್ಯತೆ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಹುಲಿಯು ಮಹತ್ವ ಪಾತ್ರವನ್ನು ವಹಿಸಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಮಹೇಶ್ ತಿಳಿಸಿದರು.
ತಾಲೂಕಿನ ತಿಮ್ಮರಾಜಿಪುರದ ವಸತಿ ಶಾಲೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ, ವನ್ಯಜೀವಿ ವಲಯ ಕೊಳ್ಳೇಗಾಲ ವತಿಯಿಂದ ಆಯೋಜಿಸಿದ್ದ ವಿಶ್ವ ಹುಲಿ ದಿನಾಚರಣೆ ಹಾಗೂ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾದರೆ ಹಸಿರು ಹೊದಿಕೆ ನಾಶವಾಗಿ ಮಣ್ಣಿನ ಸವಕಳಿಯಾಗಿ ಜೀವವೈವಿಧ್ಯತೆಯ ಅಸಮತೋಲನ ಉಂಟಾಗುತ್ತದೆ. ಯಾವ ಅರಣ್ಯ ಪ್ರದೇಶದಲ್ಲಿ ಹುಲಿಯು ವಾಸವಾಗಿರುತ್ತದೆಯೋ ಅರಣ್ಯವು ಸಮೃದ್ಧಿಯ ಸೂಚಕವಾಗಿರುತ್ತದೆ ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಭವಿಷ್ಯದಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ: ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಜಿ.ಸಿಂಚನಾ ಮತ್ತು ಎಲ್.ಸಮನ್ವಿತಾ ಅವರನ್ನು ಅರಣ್ಯ ಇಲಾಖೆ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ರಾಜೇಂದ್ರ, ರಾಸರಾಜು, ನಾಗೇಂದ್ರ, ಉಪವಲಯ ಅರಣ್ಯ ಅಧಿಕಾರಿ ರಘು ರಾಮ್, ಗಸ್ತು ಅರಣ್ಯಪಾಲಕ ಸುನಿಲ್ ಬಸಪ್ಪ ಬೆಳವಿ, ಸಂಜುನಾಥ್ ಆಯಟ್ಟಿ, ಬಸವರಾಜ ಹಬ್ಬದ, ಅರಣ್ಯ ವೀಕ್ಷಕರಾದ ತಮ್ಮಯ್ಯ ಗೌಡ, ಶಿವಮ್ಮ, ಆಕಾಶ್ ಸೋಪಾನ ಜೋಷಿ, ಸಿದ್ದರಾಮು ಇಲಾಖೆ ಸಿಬ್ಬಂದಿ ಮತ್ತು ಶಾಲೆಯ ಶಿಕ್ಷಕರು ಇದ್ದರು.