ಬಾಲ್ಯ ಶಿಕ್ಷಣ ಬಲಪಡಿಸಲು ಸಮುದಾಯದ ಪಾತ್ರ ಮುಖ್ಯ

13 SARAG 2
ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಅಂಗನವಾಡಿ ಹಬ್ಬ ಕಾರ್ಯಕ್ರಮದಲ್ಲಿ ರವಿಕುಮಾರ್ ಸೇರಿದಂತೆ ಇತರ ಗಣ್ಯರು ವಿವಿಧ ಸ್ಟಾಲ್‌ಗಳನ್ನು ವೀಕ್ಷಣೆ ಮಾಡಿದರು.ರವಿಕುಮಾರ್, ಚಿನ್ನಮ್ಮ, ದೀಪಾ,ದಿವ್ಯ, ಪುನೀತ್ ಇತರರು ಇದ್ದರು.
Published on

ಸರಗೂರು : ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದ ಪ್ರಾಮುಖ್ಯತೆಯನ್ನು ಸಮುದಾಯಕ್ಕೆ ತಿಳಿಸುವ ಸಲುವಾಗಿ ಹಾಗೂ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯವಾದದು ಎಂಬುದನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಶುಕ್ರವಾರ ಮಕ್ಕಳ ಜಾಗೃತಿ ಸಂಸ್ಥೆ, ಮುಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಚ್‌ಸಿಎಲ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಳ್ಳೂರು ವೃತ್ತದ ಅಂಗನವಾಡಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ಆರು ತಿಂಗಳಿಗೊಮ್ಮೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಡೆಯಬೇಕು. ಇದರಿಂದ ಮಕ್ಕಳಿಗೆ ಹಾಗೂ ಪಾಲಕರಿಗೆ ಅರಿವು ಉಂಟಾಗುತ್ತದೆ. ಎಲ್ಲ ಕ್ಷೇತ್ರದ ಬೆಳವಣಿಗೆಗಳು ಸಾಧ್ಯವಾಗುತ್ತದೆ. ಮಕ್ಕಳ ಜಾಗೃತಿ ಸಂಸ್ಥೆ ಒಂದು ಉತ್ತಮ ಕಾರ್ಯಕ್ರಮ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದರು.

ಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮಾತನಾಡಿದರು. ಮಕ್ಕಳಲ್ಲಿ ಮಾತು, ಭಾಷೆ, ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಗಳು, ಪೋಷಣೆ, ಪಾಲಕರಿಗೆ ಕ್ರಿಯಾತ್ಮಕ ಆಟಗಳನ್ನು ನಡೆಸಲಾಯಿತು. ಪ್ರತಿಯೊಂದು ಸ್ಟಾಲ್ ನಲ್ಲೂ ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಪೋಸ್ಟರ್‌ಗಳನ್ನೂ ಮುಳ್ಳೂರು ವೃತ್ತದ ಶಿಕ್ಷಕಿಯರು, ಮಕ್ಕಳ ಜಾಗೃತಿ ಸಂಸ್ಥೆಯ ಸಂಯೋಜಕರೊಡಗೂಡಿ ಪಾಲಕರಿಗೆ ವಿವರಿಸಿದರು ಎಂದು ಮಾಹಿತಿ ನೀಡಿದರು.

ಎಚ್.ಡಿ.ಕೋಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಮಾತನಾಡಿ, ಅಂಗನವಾಡಿಯಲ್ಲಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಪರಿಚಯ ಮಾಡಿಸುವುದರ ಮೂಲಕ ಪಾಲಕರು ಅಂಗನವಾಡಿ ಕಡೆ ತಿರುಗಿ ನೋಡುವಂತೆ ಮಾಡಿದ ಶಿಕ್ಷಕಿಯರು ಹಾಗೂ ಸಹಾಯಕಿಯರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಬಾಳೆ, ತಳಿರು, ತೋರಣ, ರಂಗವಲ್ಲಿಯಿಂದ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಶಿಕ್ಷಕಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮ್ಮ ರಾಮನಾಯಕ, ಅಂಗನವಾಡಿ ಮೇಲ್ವಿಚಾರಕಿ ಚಿನ್ನಮ್ಮ,ಗಾಯತ್ರಿ ಕಲ್ಲಂಬಾಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜ್ಯೋತಿ, ಕಲ್ಲಂಬಾಳು ಗ್ರಾಪಂ ಸದಸ್ಯೆ ರೇಖಾನಿಲಕಂಠ, ಮುಳ್ಳೂರು ಗ್ರಾಪಂ ಸದಸ್ಯ ಶ್ರೀನಿವಾಸ್, ಜಯಮ್ಮ ,ರವಿ, ಗ್ರಾಮದ ಮುಖಂಡರು ರಾಜಶೇಖರ್, ಕುಮಾರ್, ಮಲ್ಲೇಶ್ ಮುಳ್ಳೂರು ವೃತ್ತದ ಯೂನಿಯನ್ ಲೀಡರ್ ಸುಮಾ, ಮಕ್ಕಳ ಜಾಗೃತಿ ಸಂಸ್ಥೆಯ ವ್ಯವಸ್ಥಾಪಕ ದಿವ್ಯಾ, ನವೀನ್ ಕುಮಾರ್, ಮುಳ್ಳೂರು ವೃತ್ತದ ಸಂಯೋಜಕ ಪುನೀತ್ ಅಂಬಳೆ, ಸಿದ್ದರಾಜು , ಅಂಗನವಾಡಿ ಮಕ್ಕಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net