ಮತ್ತೆ ಮುನ್ನೆಲೆಗೆ ರಸ್ತೆ ವಿಸ್ತರಣೆ ವಿವಾದ

3
ವಿವಾದಕ್ಕೆ ಎಡೆ ಮಾಡಿದ ಚಿಕ್ಕಬಳ್ಳಾಪುರದ ಗಂಗಮ್ಮನ ಗುಡಿ ರಸ್ತೆ ವಿಸ್ತರಣೆ.
Published on

ಅಂಗಡಿ ತೆರವು ನಿಶ್ಚಿತ ಎಂಬ ಶಾಸಕರ ನಿಲುವಿಗೆ ಸಂಸದರ ವಿರೋಧ -ಅಧಿಕಾರಿಗಳಿಗೆ ತಲೆನೋವು

ಚಿಕ್ಕಬಳ್ಳಾಪುರ: ಗಂಗಮ್ಮನಗುಡಿ ಮತ್ತು ಬಜಾರ್ ರಸ್ತೆ ವಿಸ್ತರಣೆ ವಿಚಾರ ಪರ ಮತ್ತು ವಿರೋಧದ ಚರ್ಚೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಸುಗಮ ಸಂಚಾರ ಮತ್ತು ಜನರ ಹಿತದೃಷ್ಟಿಯಿಂದ ನಿರ್ದಾಕ್ಷಿಣ್ಯವಾಗಿ ರಸ್ತೆ ವಿಸ್ತರಣೆ ಅಡ್ಡ ಬರುವ ಕಟ್ಟಡಗಳನ್ನು ಒಡೆದು ಹಾಕಲಾಗುತ್ತದೆ ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಗುಂಪು ಹೇಳುತ್ತಿದೆ. ಮತ್ತೊಂದೆಡೆ ಯಾವುದೇ ಕಾರಣಕ್ಕೂ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸಂಸದ ಡಾ. ಕೆ. ಸುಧಾಕರ್ ಹೇಳುತ್ತಿದ್ದಾರೆ. ಎರಡು ಕಡೆ ಪರ ಮತ್ತು ವಿರೋಧದ ಪ್ರತ್ಯೇಕ ಕೂಗಿಗೆ ಅಧಿಕಾರಿಗಳು ತಲೆನೋವು ಅನುಭವಿಸುವಂತಾಗಿದೆ.

ತೆರವಿಗೆ ಕಾಯುತ್ತಿರುವ ಸಿಬ್ಬಂದಿ

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ರಸ್ತೆ ವಿಸ್ತರಣೆ ವಿಚಾರವಾಗಿ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಸಂಬಂಧಪಟ್ಟ ಮಾಲೀಕರಿಗೆ ಮೂರು ಬಾರಿ ನೋಟಿಸ್ ನೀಡಿದ ಬಳಿಕ ನಿರ್ವಹಿಸಬೇಕಾದ ಮುಂದಿನ ಕೆಲಸಗಳ ಬಗ್ಗೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ. ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಮುಹೂರ್ತ ನಿಗದಿಪಡಿಸಿ, ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಲು ಸಿಬ್ಬಂದಿ ತುದಿಗಾಲಿನಲ್ಲಿ ನಿಂತಿದ್ದಾರೆ.

ಕಟ್ಟಡ ಮಾಲೀಕರಲ್ಲಿ ಆತಂಕ

ದಶಕಗಳಿಂದಲೂ ತೆರವು ಕಾರ್ಯಾಚರಣೆ ಬಗ್ಗೆ ಕೇವಲ ಮಾತಿನಲ್ಲಿ ಹೇಳುತ್ತಿದ್ದರೂ ಅಧಿಕೃತ ಪ್ರಕ್ರಿಯೆ ನಡೆದಿರಲಿಲ್ಲ. ಕೇವಲ ರಸ್ತೆಯ ವ್ಯಾಪ್ತಿ ಅಳತೆ, ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡುವ ಕೆಲಸವಾಗಿದೆ. ಈಗ ಜಿಲ್ಲಾಧಿಕಾರಿಗಳ ಹಂತದಲ್ಲಿ ರಸ್ತೆ ವಿಸ್ತರಣೆ ವಿಚಾರದಲ್ಲಿ ಸಭೆಗಳು ನಡೆಯುತ್ತಿವೆ. ಚರ್ಚೆಗಳು ಮುಗಿದು, ಕಾರ್ಯಾಚರಣೆ ಹಂತಕ್ಕೆ ಬಂದಿದ್ದು ಹಲವು ವರ್ಷಗಳಿಂದ ಆದಾಯ ಮತ್ತು ಆಶ್ರಯದ ನೆಲೆಯಾಗಿದ್ದ ಕಟ್ಟಡಗಳನ್ನು ಕಳೆದುಕೊಳ್ಳುವ, ನಷ್ಟ ಅನುಭವಿಸಬೇಕಾದ ಆತಂಕದಲ್ಲಿದ್ದಾರೆ.

ಚರ್ಚಿಸಿಯೇ ತೀರ್ಮಾನ

ರಸ್ತೆ ವಿಸ್ತರಣೆ ವಿಚಾರವಾಗಿ ಸಂಸದರ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿರುವುದರಿಂದ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಸ್ತೆಬದಿಯ ಕಟ್ಟಡ ಮಾಲೀಕರು, ಸ್ಥಳೀಯರೊಂದಿಗೆ ಚರ್ಚಿಸಿ, ಈ ವಿಚಾರವಾಗಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಕಟ್ಟಡಗಳನ್ನು ಒಡೆಯಲು ಬಿಡುವುದಿಲ್ಲ ಎಂದು ಸಂಸದರು ಖಡಕ್ ಆಗಿ ಹೇಳಿದ್ದಾರೆ.ಈಗಾಗಲೇ ನಗರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸುಗಮ ಸಂಚಾರಕ್ಕೆ ಯೋಗ್ಯ ರೀತಿಯ ಕೆಲಸಗಳಾಗಬೇಕು. ಒಡೆಯುವುದು ಸುಲಭ, ನಿರ್ಮಿಸುವುದು ಕಷ್ಟ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಮನಸ್ಸಿಗೆ ಬಂದಂತೆ ಕೆಲಸ ಮಾಡಿ ಜನರನ್ನು ಬೀದಿಪಾಲು ಮಾಡುವುದು ಸರಿಯಲ್ಲ ಎಂದು ಸಂಸದರು ಹೇಳಿದ್ದಾರೆ.

ಜಿಲ್ಲಾಡಳಿತ - ನಗರಸಭೆ ನಡುವೆ ಫೈಟ್

ರಸ್ತೆ ವಿಸ್ತರಣೆ ಪ್ರಕ್ರಿಯೆಯಲ್ಲಿ ಮೊದಲಿನಿಂದಲೂ ಜಿಲ್ಲಾಡಳಿತ ಮುಂಚೂಣಿಯಲ್ಲಿದೆ. ಹಿಂದೆ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವಧಿಯಲ್ಲಿ ಸರ್ವೇ ತ್ವರಿತವಾಗಿ ಕೈಗೊಂಡು, ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ನಗರಸಭೆಯ ಕೆಲ ಸದಸ್ಯರ ಒತ್ತಡಕ್ಕೆ ಕೆಲಸ ಅರ್ಧದಲ್ಲಿಯೇ ಸ್ಥಗಿತವಾಗಿತ್ತು. ಇನ್ನೊಬ್ಬ ಜಿಲ್ಲಾಧಿಕಾರಿ ಪಿ.ಎನ್.ಅನಿರುಧ್ ಶ್ರವಣ್ ಮತ್ತೆ ಕೈಗೆ ತೆಗೆದುಕೊಂಡು, ಪೊಲೀಸ್ ಇಲಾಖೆಯ ಸಲಹೆಯಂತೆ ಗಂಗಮ್ಮನಗುಡಿ ಮತ್ತು ಬಜಾರ್ ರಸ್ತೆಯಲ್ಲಿ ತಾತ್ಕಾಲಿಕವಾಗಿ ಏಕಮುಖ ವಾಹನ ಸಂಚಾರ ವ್ಯವಸ್ಥೆಯನ್ನು ತರಲಾಗಿತ್ತು. ಆದರೆ, ಇದಕ್ಕೂ ವಿರೋಧ ವ್ಯಕ್ತವಾಗಿ, ಕೊನೆಗೆ ಕೈಬಿಡಲಾಯಿತು. ಇಲ್ಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಜನರು ಗಮನ ಸೆಳೆದಾಗ ಅಧಿಕಾರಿಗಳು ಮೌನ ವಹಿಸುತ್ತಿದ್ದರು. ಪ್ರದೀಪ್ ಈಶ್ವರ್ ಶಾಸಕರಾದ ಬಳಿಕ ಎಷ್ಟೇ ವಿರೋಧ ವ್ಯಕ್ತವಾದರೂ ರಸ್ತೆ ಅಗಲೀಕರಣದ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ ಎಂಬ ಮಾತು ಹೇಳಲಾಗುತ್ತಿದೆ.

ಜನಪ್ರತಿನಿಧಿಗಳ ಬಳಿಗೆ ವ್ಯಾಪಾರಿಗಳು

ಪರ ಮತ್ತು ವಿರೋಧ ಮಾತುಗಳು ವ್ಯಕ್ತವಾಗುತ್ತಿರುವಂತೆ ರಸ್ತೆ ವಿಸ್ತರಣೆಗೆ ಕಟ್ಟಡ ಮತ್ತು ಜಾಗವನ್ನು ಕಳೆದುಕೊಳ್ಳುವ ಮಾಲೀಕರು ಸ್ಥಳೀಯ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಅವರವರ ಮೂಗಿನ ನೇರಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಗರಸಭೆ ಕೆಲ ಸದಸ್ಯರು ಸಾಥ್ ನೀಡಿದ್ದು, ರಾಜಕೀಯಕ್ಕೆ ತಳಕು ಹಾಕಿಕೊಂಡಿದೆ. ಬಹುತೇಕ ವ್ಯಾಪಾರಸ್ಥರು ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ವಿಸ್ತರಣೆಯಾಗಬೇಕು ಎನ್ನುತ್ತಿದ್ದಾರೆ ಬಹುತೇಕ ಜನರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net