ಕೊಳಕೆಗದ್ದೆ ಸಂಪರ್ಕಕ್ಕಿಲ್ಲ ರಸ್ತೆ, ಮಳೆಗಾಲದಲ್ಲಿ ದಿಗ್ಬಂಧನ

kolake gadde road
ಕೊಳಕೆಗದ್ದೆಯಲ್ಲಿರುವ ಕಾಲುದಾರಿ.
Published on

ಅನ್ಸಾರ್ ಇನೋಳಿ ಉಳ್ಳಾಲ

ಸುಸಜ್ಜಿತ ರಸ್ತೆಗಳು ಅಭಿವೃದ್ಧಿಗೆ ರಹದಾರಿ. ಪ್ರಸ್ತುತ ದಿನಗಳಲ್ಲಿ ಬಹುತೇಕ ಹಳ್ಳಿಗಳ ಗಲ್ಲಿ - ಗಲ್ಲಿಗೂ ಕಾಂಕ್ರೀಟ್ ರಸ್ತೆ ಇದೆ. ಆದರೆ ಸೂಕ್ತ ರಸ್ತೆ ಇಲ್ಲದೆ ಹಳೇಕಾಲದ ಕಾಲುದಾರಿಯನ್ನೇ ನೆಚ್ಚಿಕೊಂಡಿರುವ ಚಿತ್ರಣ ಹರೇಕಳ ಗ್ರಾಮದಲ್ಲಿ ಕಾಣಲು ಸಿಗುತ್ತದೆ.

ಉಳ್ಳಾಲ ತಾಲೂಕು, ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ ಹರೇಕಳ ಗ್ರಾಮ. ಈ ಗ್ರಾಮ ಶಾಸಕ ಯು.ಟಿ.ಖಾದರ್ ಅವರಿಗೆ ಪ್ರಿಯವಾದ ಗ್ರಾಮ, ಇವರ ತಂದೆಯ ಹೆಸರು ಗ್ರಾಮದ ಒಂದು ಊರಿಗೆ ಇರುವುದೇ ಇದಕ್ಕೆ ಕಾರಣ. ಆ ಕಾರಣದಿಂದಲೇ ಗ್ರಾಮದಲ್ಲಿ ಯಾವುದೇ ಕೆಲಸ ಆಗಬೇಕಾದರೂ ಶಾಸಕರು ಅನುದಾನ ಇಲ್ಲ ಎಂದು ಹೇಳಿಲ್ಲ. ಆದರೂ ಮುದಲೇಮಾರು- ಮಂಜಲ್‌ಗುತ್ತುವನ್ನು ಸಂಪರ್ಕಿಸುವ ಕೊಳಕೆಗದ್ದೆ ಮಾತ್ರ ಇದಕ್ಕೆ ಅಪವಾದವಾಗಿದೆ. ಇಲ್ಲಿಗೊಂದು ಸುಸಜ್ಜಿತ ರಸ್ತೆ ನಿರ್ಮಿಸುವ ಉದ್ದೇಶ ಇದ್ದರೂ ಈ ವಿಚಾರದಲ್ಲಿ ಜನಪ್ರತಿನಿಧಿಗಳು ನಿಸ್ಸಹಾಯಕರು. ಯಾಕೆಂದರೆ ರಸ್ತೆ ನಿರ್ಮಾಣಕ್ಕೆ ಬೇಕಾದ ಜಮೀನು ಖಾಸಗಿಯವರಲ್ಲಿದೆ.

ಹರೇಕಳ ರಾಮಕೃಷ್ಣ ಶಾಲೆಯ ಹಿಂಬದಿ ರಸ್ತೆಯಲ್ಲಿ ಕೊಳಕೆಯ ಮೂಲಕ ಸಾಗಿದರೆ ರಸ್ತೆಯೇ ಇಲ್ಲದ ಊರು ಸಿಗುತ್ತದೆ. ಇಲ್ಲಿರುವುದೆಲ್ಲವೂ ಖಾಸಗಿ ಗದ್ದೆಗಳು. ಹಿಂದೆಲ್ಲಾ ಕೊಜಪಾಡಿ, ಬೈತಾರ್, ಸಂಪಿಗೆದಡಿ, ದೆಬ್ಬೇಲಿ, ವರೇಕಳಕ್ಕೆ ಹೋಗುವ ಜನರು ಗದ್ದೆಯ ನಡುವಿರುವ ಕಾಲುದಾರಿಯನ್ನು ಬಳಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಈ ರಸ್ತೆಯಲ್ಲಿ ಅದರಲ್ಲೂ ಮಳೆಗಾಲದಲ್ಲಿ ಬರುವುದು ಕಷ್ಟವಾಗಿರುವುದರಿಂದ ನಾಲ್ಕೈದು ಕಿ.ಮೀ. ಸುತ್ತು ಬಳಸಿ ಬಸ್ಸಿನಲ್ಲಿ ಹೋಗುತ್ತಾರೆ.

ಈ ಭಾಗದಲ್ಲಿ 100ಕ್ಕಿಂತಲೂ ಅಧಿಕ ಮನೆಗಳಿದ್ದು, 200ರಷ್ಟು ಮಕ್ಕಳು ಶಾಲೆಗೆ ಹೋಗುತ್ತಾರೆ. ಹತ್ತಿರದಲ್ಲೇ ಇರುವ ಅನುದಾನಿತ ಪ್ರಾಥಮಿಕ ಮತ್ತು ರಾಮಕೃಷ್ಣ ಪ್ರೌಢಶಾಲೆಗೆ 60 ಮಕ್ಕಳು ಬರುತ್ತಾರೆ. ಈ ಮಕ್ಕಳು ಇದೇ ಗದ್ದೆಯಲ್ಲಿ ನಡೆದುಕೊಂಡೇ ಶಾಲೆಗೆ ಬರಬೇಕಾಗುತ್ತದೆ. ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ತುಂಬಿ ಅಪಾಯಕಾರಿಯಾಗಿರುವುದರಿಂದ ಮಕ್ಕಳೊಂದಿಗೆ ಪಾಲಕರೂ ಶಾಲೆವರೆಗೆ ಬರಬೇಕಾಗುತ್ತದೆ. ಕೆಲವೊಮ್ಮೆ ಕೆಸರಿನಲ್ಲಿ ಕಾಲು ಜಾರಿ ಗದ್ದೆಗೆ ಬಿದ್ದು ಹಿಂದಕ್ಕೆ ಹೋಗುವುದೂ ಇದೆ.

ದೆಬ್ಬೇಲಿಯಾಗಿ ಕೊಜಪಾಡಿಗೆ ಹೋಗಿ ಬಸ್ಸಿನಲ್ಲಿ ಹೋಗಬಹುದಾದರೂ ಇಲ್ಲಿಗಿರುವುದು ಒಂದು ಬಸ್ಸು ಮಾತ್ರ! ಅದಕ್ಕೂ ನಾಲ್ಕರಿಂದ ಐದು ಕಿ.ಮೀ.ವರೆಗೆ ಸುತ್ತು ಬರಬೇಕಾಗುತ್ತದೆ. ಇಲ್ಲಿರುವ ಬಹುತೇಕ ಮನೆಗಳಿಗೆ ರಸ್ತೆ ಸಂಪರ್ಕವೇ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಕಾಯಿಲೆ ಪೀಡಿತರನ್ನು ಹೊತ್ತುಕೊಂಡೇ ಹೋಗಬೇಕಾದ ದುಸ್ಥಿತಿ ಇದೆ. ಮಳೆಗಾಲದಲ್ಲಂತೂ ಆಸ್ಪತ್ರೆ, ತುರ್ತು ಕಾರ್ಯಕ್ಕೆ ಹೋಗಬೇಕಾದವರ ಪಾಡು ಅನುಭವಿಸಿದವರಿಗೆ ಮಾತ್ರ ಗೊತ್ತು. ರಸ್ತೆ ನಿರ್ಮಾಣಕ್ಕೆ ಸರ್ಕಾರದ ಅನುದಾನ ನೀಡಲು ಶಾಸಕರು ಬದ್ಧರಿದ್ದರೂ ಖಾಸಗಿ ಜಮೀನು ಆಗಿರುವುದರಿಂದ ಜಮೀನಿನ ಮಾಲೀಕರೇ ಭೂಮಿ ಬಿಟ್ಟುಕೊಟ್ಟರೆ ಈ ಭಾಗಕ್ಕೂ ರಸ್ತೆ ನಿರ್ಮಾಣಗೊಂಡು ಅಭಿವೃದ್ಧಿಯ ದಿನಗಳನ್ನು ಕಾಣಲು ಸಾಧ್ಯ ಎನ್ನುವ ಮಾತು ಗ್ರಾಮಸ್ಥರದ್ದು.

ಹರೇಕಳ ಗ್ರಾಮದ ಪ್ರತಿಯೊಂದು ಗಲ್ಲಿಯಲ್ಲೂ ರಸ್ತೆ ಇರಬೇಕು ಎನ್ನುವುದು ನಮ್ಮ ಅಭಿಲಾಷೆ, ಕೊಳಕೆಗದ್ದೆ ಭಾಗಕ್ಕೂ ರಸ್ತೆ ನಿರ್ಮಾಣ ಬಗ್ಗೆ ಶಾಸಕರಲ್ಲಿ ಮಾತುಕತೆ ನಡೆಸಲಾಗಿದ್ದರೂ ಸರ್ಕಾರಿ ಜಮೀನಿಲ್ಲದ ಕಾರಣ ಸಮಸ್ಯೆಯಾಗಿದೆ. ಖಾಸಗಿಯವರು ಜಮೀನು ಬಿಟ್ಟುಕೊಟ್ಟಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.-ಬದ್ರುದ್ದೀನ್ ಫರೀದ್‌ನಗರ ಅಧ್ಯಕ್ಷ, ಹರೇಕಳ ಗ್ರಾಪಂ

ಪ್ರಸ್ತುತ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲೂ ರಸ್ತೆ ನಿರ್ಮಾಣಗೊಂಡು ಹಳ್ಳಿಗಳ ಅಭಿವೃದ್ಧಿ ಆಗಿದೆ. ಆದರೆ ಇಲ್ಲಿ ರಸ್ತೆಯಿಲ್ಲದೆ ಶಾಲಾ ಮಕ್ಕಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ, ಮಳೆಗಾಲದಲ್ಲಿ ತೀರಾ ಸಂಕಷ್ಟ.- ಡಿ.ಗಣಪ ಶೆಟ್ಟಿ ನಿವೃತ್ತ ಮುಖ್ಯಶಿಕ್ಷಕ

ಹರೇಕಳಕ್ಕೆ ಬಸ್ಸುಗಳ ಸಂಖ್ಯೆಯೂ ಕಡಿಮೆಯಿದ್ದು ಬೆಳಗ್ಗೆ ಒಂದು ಬಸ್ಸು ಮಾತ್ರ ಇದೆ. ಅದೂ ತುಂಬಿರುವುದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ. ಈ ಬಸ್ಸಿನಲ್ಲಿ ಬರಬೇಕಾದರೆ ಐದು ಕಿ.ಮೀ. ಕ್ರಮಿಸಬೇಕು. ರಾಮಕೃಷ್ಣ ಶಾಲೆಗೆ 60 ಮಕ್ಕಳು ಬರುತ್ತಿದ್ದು ಬೇಸಿಗೆಯಲ್ಲಿ ನಡೆದೇ ಬರುತ್ತಾರೆ, ಆದರೆ ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ನಿಲ್ಲುವ ಕಾರಣ ಪೋಷಕರು ಜೊತೆಯಲ್ಲೇ ಬರಬೇಕಾಗುತ್ತದೆ.- ತ್ಯಾಗಂ ಹರೇಕಳ ದೈಹಿಕ ಶಿಕ್ಷಣ ಶಿಕ್ಷಕ, ರಾಮಕೃಷ್ಣ ಪ್ರೌಢಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net