ಮಳೆಯಿಂದ ಕೆಸರು ಗದ್ದೆಯಾದ ರಸ್ತೆ

FotoJet (1)
Published on

ರಾಮನಗರ: ನಗರದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೂ ಹೆಚ್ಚಿನ ಕಾಲ ಬಿರುಸಾಗಿ ಮಳೆ ಸುರಿಯಿತು. ಹಬ್ಬದ ಸಂಭ್ರಮದಲ್ಲಿ ಖರೀದಿಯಲ್ಲಿ ತೊಡಗಿದ್ದ ಜನರು ವ್ಯಾಪಾರಸ್ಥರು ಮಳೆಯಲ್ಲಿ ತೊಯ್ಯುವಂತಾಯಿತು.

ಬೀದಿಗಳಲ್ಲಿ ಮಳೆನೀರು ಹೊಳೆಯಂತೆ ಹರಿಯಿತು. ದೀಪಾವಳಿ ಹಬ್ಬದ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಮಳೆಯಿಂದ ಸಮಸ್ಯೆ ಎದುರಿಸಿದರು. ವ್ಯಾಪಾರದ ಖುಷಿಯಲ್ಲಿದ್ದವರ ಮುಖದಲ್ಲಿ ಚಿಂತೆ ಕಂಡುಬಂತು. ರಸ್ತೆ ಬದಿಗಳಲ್ಲಿ ಮಣ್ಣಿನ ದೀಪ, ಹಣ್ಣು, ಹೂವು, ತರಕಾರಿ ಸೇರಿ ಹಬ್ಬದ ಸಾಮಗ್ರಿ ಜೋಡಿಸಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಟಾರ್ಪಲ್ ಮೊರೆ ಹೋಗಿ ಸಾಮಗ್ರಿ ರಕ್ಷಣೆಗೆ ಮುಂದಾದರು.

ಮಧ್ಯಾಹ್ನ 3 ಗಂಟೆಗೆ ಪ್ರಾರಂಭಗೊಂಡ ಮಳೆ ಸಂಜೆ 4 ಗಂಟೆ ವರೆಗೂ ಸುರಿಯಿತು. ಹಬ್ಬದ ಸಾಮಾನು ಕೊಳ್ಳಲು ಬಂದ ಜನರು ರಸ್ತೆ ಬದಿಯ ಅಂಗಡಿಗಳ ಮುಂದೆ ನಿಂತು ಆಶ್ರಯ ಪಡೆದರು. ಮಳೆ ಬಿಡುವುಕೊಟ್ಟ ನಂತರ ಜನರು ಖರೀದಿ ಮುಂದುವರಿಸಿದರು. ನಗರ ಪ್ರದೇಶದ ಜನರು ಕೊಡೆಗಳ ಆಶ್ರಯದಲ್ಲಿ ಮನೆ ಸೇರಿದರು. ಸಂಜೆ ಮಳೆ ಬಿಡುವುಕೊಟ್ಟ ನಂತರ ಜನರು ಮತ್ತೆ ಪೇಟೆಬೀದಿಯಲ್ಲಿ ಖರೀದಿಯಲ್ಲಿ ತೊಡಗಿದರು.

ರಸ್ತೆತುಂಬಾ ನೀರು: ರಾಮನಗರದ ರಸ್ತೆಗಳು ಗುಂಡಿಬಿದ್ದು, ಮಳೆ ಬಂದ ಸಂದರ್ಭದಲ್ಲಿ ಕೆರೆಯಂತಾಗುತ್ತವೆ. ಗುರುವಾರ ಸುರಿದ ಮಳೆಯಲ್ಲಿ ರಾಮನಗರದ ರಸ್ತೆಗಳು ಈ ಚಿತ್ರಣ ತೆರೆದಿಟ್ಟಿತ್ತು. ರಾಮನಗರದ ಮುಖ್ಯರಸ್ತೆ, ಅಗ್ರಹಾರ ರಸ್ತೆ, ಎಂ.ಜಿ.ರಸ್ತೆ, ಮಂಡೀಪೇಟೆ ರಸ್ತೆ, ಛತ್ರದಬೀದಿ ರಸ್ತೆಗಳಲ್ಲಿ ಮಳೆ ನೀರಿನಿಂದ ಕೆರೆಯಂತಾಗಿತ್ತು. ಅದರಲ್ಲೇ ವಾಹನ ಸವಾರರು, ನಡೆದಾಡುವವರು ಪರದಾಡಿದರು.

ಮಂಡೀಪೇಟೆಯ ರಸ್ತೆಯಂತೂ ಗುಂಡಿಗಳಿಂದ ಕೂಡಿದ್ದು, ಮಣ್ಣಿನ ರಸ್ತೆಯಾಗಿರುವ ಕಾರಣ ಮಳೆ ನಿಂತ ಮೇಲೆ ರಸ್ತೆ ತುಂಬಾ ನೀರು ತುಂಬಿ ಇಡೀ ರಸ್ತೆ ಕೆಸರುಮಯವಾಗಿ ಜನರಿಗೆ ಕಿರಿಕಿರಿ ತರಿಸಿತ್ತು.

ಉಕ್ಕಿ ಹರಿದ ಚರಂಡಿಗಳು: ಹೆಚ್ಚಿನ ಮಳೆಯಾದ್ದರಿಂದ ಚರಂಡಿಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದು ಚರಂಡಿ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿರುವ ದೃಶ್ಯಗಳು ಕಂಡುಬಂತು. ಅರ್ಕಾವತಿ ನದಿಯಲ್ಲಿ ಮಳೆ ನಿಂತ ಮೇಲೆ ಒಂದಷ್ಟು ನೀರಿನ ಪ್ರಮಾಣವೂ ಏರಿಕೆ ಕಂಡಿತು.

ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹ

ಎರಡೂ ವರ್ಷಗಳಿಂದಲೂ ರಾಮನಗರದ ರಸ್ತೆಗಳು ಗುಂಡಿಮಯವಾಗಿವೆ. ಮಳೆ ಬಂದ ಸಂದರ್ಭದಲ್ಲಂತೂ ರಸ್ತೆಯಲ್ಲಿ ಓಡಾಟ ಸಾಧ್ಯವಾಗುವುದಿಲ್ಲ. ರಸ್ತೆ ಗುಂಡಿ ಮುಚ್ಚಿ ಸಮಸ್ಯೆ ತಪ್ಪಿಸಿ ಎಂದು ನಗರಸಭೆಗೆ ಹೇಳುತ್ತಿದ್ದರೂ ಕಿವಿ ಕೇಳದಂತೆ ಕಣ್ಣು ಕಾಣಿಸದಂತೆ ಜಾಣಮೌನ ವಹಿಸಿದ್ದಾರೆ. ಸಾರ್ವಜನಿಕ ಸಮಸ್ಯೆ ನಗರಸಭೆಗೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಕಿಡಿಕಾರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net