

ಪೆರ್ಲ: ನಂಬಿಕೆಯ ತಳಹದಿಯಲ್ಲಿ ರೂಢಿಗೊಂಡ ತುಳುವರ ಆಚರಣೆ ಆರಾಧನೆಗಳು ಅವೈಜ್ಞಾನಿಕವಾದ ತಪ್ಪು ಕಲ್ಪನೆಗಳಲ್ಲ. ಬದಲಿಗೆ ಅನ್ಯೋನ್ಯವಾದ ಬದುಕಿಗೆ ಪ್ರೇರೇಪಣೆಯಾಗಬಲ್ಲ ರೂಢಿಗತ ಸತ್ಯ ಕಲ್ಪನೆಗಳು ಎಂದು ಹಿರಿಯ ಲೇಖಕ, ಸಂಶೋಧಕ, ಕಾಸರಗೋಡು ಸರ್ಕಾರಿ ಕಾಲೇಜು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಅಭಿಪ್ರಾಯಪಟ್ಟರು.
ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಸಹಯೋಗದಲ್ಲಿ ಬೆದ್ರಂಪಳ್ಳದ ಪರಿಶ್ರಮ ಗಾರ್ಡನ್ಸ್‌ನಲ್ಲಿ ಆಯೋಜಿಸಿದ ಆಟಿ ಕೂಟ ಮತ್ತು ಆಷಾಢ-ಕವಿ ಸಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಆಟಿ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೇರಳ ಎಸ್ಸೆಸ್ಸೆಲ್ಸಿ ಕನ್ನಡ ಮಕ್ಕಳ ಶೈಕ್ಷಣಿಕ ಮಾರ್ಗದರ್ಶಿಯಾಗಿ ಟೀಮ್ ಕನ್ನಡ ಪ್ರಸ್ತುತಪಡಿಸಿದ ಯೂಟ್ಯೂಬ್ ಚಾನೆಲನ್ನು ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಸಹಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಬಿಡುಗಡೆಗೊಳಿಸಿದರು. ಬಳಿಕ ಪುಸ್ತಕ ಪ್ರದರ್ಶನ, ಆಷಾಢದ ಭಕ್ಷ್ಯಭೋಜ್ಯಗಳು, ಕವಿಗೋಷ್ಠಿ ಜರುಗಿತು.
ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶುಭಾಶಂಸನೆಗೈದರು. ವ್ಯಾಪಾರಿ ಮುಂದಾಳು ಟಿ.ಪ್ರಸಾದ್ ಪೆರ್ಲ, ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಸಂಚಾಲಕ ಸುಭಾಷ್ ಪೆರ್ಲ ಉಪಸ್ಥಿತರಿದ್ದರು. ಸಾಂಗತ್ಯ ಪ್ರಾರ್ಥನೆಗೈದರು. ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ ಸುಂದರ ಬಾರಡ್ಕ ವಂದಿಸಿದರು. ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು.