

ಕಡಬ: ವಿದ್ಯಾರ್ಥಿಗಳು ಒಳ್ಳೆಯ ಗೆಳೆಯರೊಂದಿಗೆ ಬೆಳೆಯಬೇಕು. ದುಶ್ಚಟಗಳಿಗೆ ಬಲಿಯಾಗದೆ ಸ್ವಸ್ಥ, ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಹೇಳಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಆಶ್ರಯದಲ್ಲಿ, ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಮಾತನಾಡಿ, ವಿದ್ಯಾರ್ಥಿಗಳು ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಆರಂಭಿಸಿದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಎಂದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದರು.
ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ವಕೀಲ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಪ್ರಗತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಶಿಕ್ಷಕ ನಾರಾಯಣ್ ಭಟ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ವಿನಯ ವಿ.ಶೆಟ್ಟಿ ಶುಭಹಾರೈಸಿದರು. ಸೇವಾಪ್ರತಿನಿಧಿಗಳಾದ ಕಾವ್ಯ ಕಾಣಿಯೂರು, ಕಾವ್ಯ ಚಾರ್ವಾಕ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಮನೋರಮಾ ವಂದಿಸಿದರು. ಶಿಕ್ಷಕಿ ಸುಶ್ಮಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.