

ಸೋಮವಾರಪೇಟೆ: ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ವಿಜೃಂಭಿಸುತ್ತಿದೆ. ಸಮಾಜವನ್ನು ತಿದ್ದಬೇಕಿರುವ ಧಾರ್ಮಿಕ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ ಎಂದು ಮುಳ್ಳೂರು ಮಠದ ಮಠಾಧೀಶ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣರಾದಿಯಾಗಿ ಎಲ್ಲ್ಲ ಶಿವಶರಣರು ಜಾತಿಯ ವಿರುದ್ಧ ಹೋರಾಡಿ ಸಮಾನತೆಯನ್ನು ಪ್ರತಿಪಾದಿಸಿದರು. ಈಗ ತದ್ವಿರುದ್ಧವಾಗಿದೆ ಎಂದು ವಿಷಾದಿಸಿದರು. ಇಂದು ಸಮಾಜದ ಯಾವುದೇ ಕ್ಷೇತ್ರದಲ್ಲಿಯಾದರೂ ತನ್ನದೇ ಗುರುವನ್ನು ಹೊಂದಿದೆ ಅವರ ಮಾರ್ಗದರ್ಶನದಿಂದ ಮಾತ್ರ ಉನ್ನತಿ ಸಾಧಿಸಲು ಸಾಧ್ಯವೆಂದರು. ಭಾರತಾಂಬೆಗೆ ಗೌರವ ಸಲ್ಲಿಸುತ್ತಿರುವುದು ಭಾರತೀಯ ಜನತಾ ಪಕ್ಷ ಆದ್ದರಿಂದ ನಾನು ಅದರ ಅಭಿಮಾನಿಯಾಗಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ಸಮಾಜದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಹಾಗೂ ಸ್ಥಾನವಿದೆ. ನಾವು ಏನಾದರೂ ಸಾಧಿಸಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಹೇಳಿದರು. ಗುರುಪೂರ್ಣಿಮೆಯ ಅಂಗವಾಗಿ ಸೋಮೇಶ್ವರ ದೇವಾಲಯದ ಅರ್ಚಕರಾದ ಚಿತ್ರಕುಮಾರ್ ಭಟ್, ನಿವೃತ್ತ ಶಿಕ್ಷಕರಾದ ತಂಗಮ್ಮ, ನಿವೃತ್ತ ಸೈನಿಕರಾದ ಚಂದ್ರಕುಮಾರ್, ಯೋಗ ಶಿಕ್ಷಕರಾದ ಪ್ರದೀಪ್ ಅವರುಗಳನ್ನು ಸನ್ಮಾನಿಸಲಾಯಿತು.