

ಚಿಕ್ಕಬಳ್ಳಾಪುರ: ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ , ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾನ್ಯಜನರಲ್ಲಿ ಮಾನವಹಕ್ಕುಗಳ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಬೀಳುತ್ತದೆ. ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹುಟ್ಟಿದ ಪ್ರತಿಯೊಬ್ಬರಿಗೂ ಸಹಜವಾದ ಮಾನವ ಹಕ್ಕುಗಳಿದ್ದು, ಸಮಾಜದಲ್ಲಿ ಕೆಲವ್ಯಕ್ತಿಗಳ ಬುದ್ಧಿವಂತಿಕೆ, ಆರ್ಥಿಕ ಮತ್ತು ಸಾಮಾಜಿಕ ಬಲ, ಪ್ರಭಾವ ಹಾಗೂ ದರ್ಪ, ದಬ್ಬಾಳಿಕೆಗಳಿಂದ ಅಸಹಾಯಕರು, ದುರ್ಬಲರು ಮಾನವಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲೇ ಅಧಿಕವಾಗಿ ಕಂಡು ಬರುತ್ತಿವೆ ಎಂದರು.
ಸಮಾಜದಲ್ಲಿ ಹಕ್ಕುಗಳ ಬಗ್ಗೆ ಚರ್ಚೆಯಾಗುತ್ತದೆಯೇ ಹೊರತು, ನಾಗರಿಕ ಕರ್ತವ್ಯಗಳನ್ನು ಮರೆಯಲಾಗುತ್ತದೆ. ಇದನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಬುದ್ಧಿವಂತಿಕೆ, ಶಕ್ತಿ, ಪ್ರಭಾವಗಳಿಂದ ಇನ್ನೊಬ್ಬರ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಇದು ಸರಿಯಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳೂ ಸೇರಿ ಎಲ್ಲೆಡೆ ವಿವಿಧ ಕಾರ್ಯಕ್ರಮ, ಶಿಬಿರ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುವ ಅಗತ್ಯವಿದೆ. ಇದಕ್ಕೆ ವಿವಿಧ ಇಲಾಖೆಗಳೊಂದಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗಿಸುವ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯವೇ ಮಾನವ ಹಕ್ಕುಗಳು ಎಂದರು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಕೃಷ್ಣಪ್ಪ ಮತ್ತಿತರರು ಇದ್ದರು.
ಪ್ರತಿಜ್ಞಾವಿಧಿ ಸ್ವೀಕಾರ
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಜಾಗೃತಿ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರತಂದಿರುವ ಕಿರುಹೊತ್ತಗೆ ಹಾಗೂ ಕರಪತ್ರ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ ಮಾನವ ಹಕ್ಕುಗಳ ದಿನಾಚರಣೆ ಮಹತ್ವವನ್ನು ಸಾರುವ ಪ್ರತಿಜ್ಞಾವಿಧಿ ಬೋಧಿಸಿದರು. ಬದುಕುವ ರೀತಿಯನ್ನು ಕಾಪಾಡುವುದು ಸೇರಿ ಸಹಜ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಆನ್‌ಲೈನ್‌ನಲ್ಲೇ ದೂರು ಸಲ್ಲಿಕೆಗೆ ಅವಕಾಶ
ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ. ವಿಶ್ವನಾಥ್ ಮಾನವ ಹಕ್ಕುಗಳ ಬಗ್ಗೆ ವಿವರಿಸಿದರು. ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದಾಗಿದೆ. ಶೋಷಣೆರಹಿತ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ. ಹಕ್ಕುಗಳ ರಕ್ಷಣೆ ಆಡಳಿತ ಯಂತ್ರದ ಕರ್ತವ್ಯ. ಯಾವುದೇ ಸಕ್ಷಮ ಕಚೇರಿ ಇಲ್ಲವೇ ಸಂಸ್ಥೆ, ನೌಕರರಿಂದಾಗಲೀ ಮಾನವ ಹಕ್ಕುಗಳ ರಕ್ಷಣಾ ಕಾರ್ಯ ವಿಫಲವಾದ ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು. ಮಾನವ ಹಕ್ಕುಗಳ ರಕ್ಷಣೆ ಎಂಬ ಮೊಬೈಲ್ ಆಪ್ ಇದ್ದು, ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ಮೂಲಕವೂ ದೂರು ನೀಡಬಹುದು. ಠಿಠಿ://ಜ್ಟ್ಚ.ಚ್ಟ್ಞಠಿ.ಜಟ.ಜ್ಞಿ ಇಲ್ಲವೇ ಡಿಡಿಡಿ.ಜ್ಟ್ಚ್ಞಛಿಠಿ.್ಞಜ್ಚಿ.ಜ್ಞಿ ಮೂಲಕ ಆಯೋಗ ನಿಗದಿಪಡಿಸಿದ ಸರಳ ನಮೂನೆಯಲ್ಲಿ ಮಾಹಿತಿಯೊಂದಿಗೆ ದೂರು ಸಲ್ಲಿಸಬಹುದು. ವಿವರಗಳಿಗೆ ಸಹಾಯವಾಣಿ ಸಂಖ್ಯೆ 1800-4252-3333 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.