ಭರವಸೆಯಾಗಿಯೇ ಉಳಿದ ಎಸಿ ಕಚೇರಿಯ ಉದ್ಯೋಗ

daughters-of-jagannath-Naik
Published on

ಕಾರವಾರ: ನಮ್ಮ ತಂದೆಯ ದೇಹವನ್ನಂತೂ ಹುಡುಕಿ ಕೊಟ್ಟಿಲ್ಲ. ನಮಗೆ ಪರಿಹಾರವನ್ನೂ ನೀಡಿಲ್ಲ.ಉದ್ಯೋಗ ನೀಡುವ ಭರವಸೆಯೂ ಈಡೇರಿಲ್ಲ ಎಂದು ಶಿರೂರು ದುರಂತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ರಾಷ್ಟ್ರೀಯ ಆರ್ಯ, ಈಡಿಗ ಮಹಾ ಮಂಡಳ ಬುಧವಾರ ಕಾರವಾರದಲ್ಲಿ ಹಮ್ಮಿಕೊಂಡಿದ್ದ ಧರಣಿಗೆ ಆಗಮಿಸಿದ ಜಗನ್ನಾಥ ನಾಯ್ಕ ಅವರ ಹಿರಿಯ ಪುತ್ರಿ ಮನಿಷಾ, ಎರಡನೇ ಪುತ್ರಿ ಕೃತಿಕಾ, ಕಿರಿಯ ಪುತ್ರಿ ಪಲ್ಲವಿ ಜಿಲ್ಲಾಡಳಿತದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.

ಜು.16 ರಂದು ಶಿರೂರು ಗುಡ್ಡ ಕುಸಿತದಲ್ಲಿ ಜಗನ್ನಾಥ ನಾಯ್ಕ ನಾಪತ್ತೆಯಾಗಿದ್ದರು. ತಮ್ಮ ಭಾವ ಲಕ್ಷ್ಮಣ ನಾಯ್ಕ ಅವರ ಚಹಾ ಅಂಗಡಿಗೆ ಅವರಿಗೆ ಸಹಾಯ ಮಾಡುವ ಸಲುವಾಗಿ ಜಗನ್ನಾಥ ನಾಯ್ಕ ತೆರಳಿದ್ದರು ಎನ್ನಲಾಗಿದೆ. ಆದರೆ, ಇದುವರೆಗೂ ಅವರ ದೇಹ ಮಾತ್ರ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ಶೀರೂರು ದುರಂತದಲ್ಲಿ ಮೃತರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ, ನಾಪತ್ತೆಯಾದವರಿಗೆ ಯಾವುದೇ ಪರಿಹಾರವಿಲ್ಲ. ಜಿಲ್ಲಾಡಳಿತ ನಾಪತ್ತೆಯಾದವರಿಗಾಗಿ ಹುಡುಕಾಟವನ್ನು ಕೈಬಿಟ್ಟಿದೆ ಎಂದು ತಮ್ಮ ಗೋಳು ತೋಡಿಕೊಂಡರು.

ನಾಪತ್ತೆಯಾದವರಿಗೆ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೆ, ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಲು ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಮೃತರ ಅಳಿಯ ಸುಭಾಷ ನಾಯ್ಕ ಅಸಮಾಧಾನ ಹೊರ ಹಾಕಿದರು.

ಕುಮಟಾ ಎಸಿ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಕುಮಟಾ ಎಸಿ ಅವರು ನಮ್ಮ ಮನೆಗೆ ಭೇಟಿ ಕೊಟ್ಟು ಭರವಸೆ ನೀಡಿದ್ದರು. ಕೆಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಶಾಸಕ ಸತೀಶ ಸೈಲ್‌ ಭರವಸೆ ನೀಡಿದ್ದರು. ಕುಮಟಾ ಎಸಿ ಕಚೇರಿಯವರು ದಾಖಲೆ ಪಡೆದಿದ್ದು, ಬಿಟ್ಟರೆ ಬೇರೆ ಯಾವುದೇ ಕ್ರಮ ವಹಿಸಿಲ್ಲ ಎಂದು ಪಲ್ಲವಿ ನಾಯ್ಕ "ವಿಜಯವಾಣಿ"ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net