ನಲ್ಲಹಳ್ಳಿ ಉದಯಕ್ಕೆ ಮೊಲವೇ ಮೂಲ!

06-04-rama-nalla halli1
Published on

* ಅರ್ಕಾವತಿ ನದಿ ದಂಡೆಯಲ್ಲಿರುವ ಗ್ರಾಮ * ಸರ್ವ ಜನಾಂಗದ ಶಾಂತಿಯ ತೋಟ

* ರೇಷ್ಮೆ, ಹೈನುಗಾರಿಕೆಗೆ ಜನರ ಒಲವು

ಗಂಗಾಧರ್ ಬೈರಾಪಟ್ಟಣ ರಾಮನಗರ

ಬೇಟೆಯಾಡಲು ಹೋದ ಬೇಟೆಗಾರನ ಕೈಗೆ ಸಿಗದೆ ತಪ್ಪಿಸಿಕೊಂಡ ಮೊಲದಿಂದಲೇ ಒಂದು ಗ್ರಾಮ ಹುಟ್ಟಿಕೊಂಡಿದೆ ಎಂದರೆ ನಂಬಲು ಅಸಾಧ್ಯ. ಆದರೆ, ಪ್ರತಿ ಗ್ರಾಮದ ಹಿಂದೆ ಒಂದು ರೋಚಕ ಇತಿಹಾಸ ಇದ್ದೇ ಇರುತ್ತದೆ. ಅದೇ ರೀತಿ ಕನಕಪುರ ತಾಲೂಕು ನಲ್ಲಹಳ್ಳಿ ಇತಿಹಾಸವೂ ಅದ್ಭುತ ಹಿನ್ನೆಲೆ ಹೊಂದಿದೆ.

ಅರ್ಕಾವತಿ ನದಿ ದಂಡೆಯ ಮೇಲೆ ಬೆಳೆದಿರುವ ಗ್ರಾಮ ನಲ್ಲಹಳ್ಳಿ ಹುಟ್ಟಿಗೆ ಮೊಲವೇ ಕಾರಣ. ಪ್ರಸ್ತುತ ಈಗ ಇರುವ ಗ್ರಾಮ ಮೊದಲು ಸಂಪೂರ್ಣವಾಗಿ ಕಾಡು ಮಯವಾಗಿತ್ತು. ಇದೇ ಗ್ರಾಮದ ಪಕ್ಕದಲ್ಲಿ ಬೇಟೆಗಾರ ನಲ್ಲನಾಯಕ ಎಂಬಾತ ಒಂದು ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದ. ಒಮ್ಮೆ ಬೇಟೆಯಾಡುತ್ತಿದ್ದ ವೇಳೆ ಮೊಲ ಈತನ ಬಾಣಕ್ಕೆ ಸಿಗದೆ ತಪ್ಪಿಸಿಕೊಳ್ಳುತ್ತದೆ.

ಮೊಲ ತಪ್ಪಿಸಿಕೊಂಡಿದ್ದರಿಂದ ಆಶ್ಚರ್ಯಚಕಿತನಾಗಿ ಅದರ ಹಿನ್ನೆಲೆಯನ್ನು ಹುಡುಕುತ್ತಾ ಹೋದಾಗ ಮೊಲ ಓಡಾದಿದ ಜಾಗದ ಮಹಿಮೆ ಬಗೆಗೆ ಮಾಹಿತಿ ದೊರೆಯುತ್ತದೆ. ಇದರೊಂದು ಗಂಡು ಮೆಟ್ಟಿನ ‘ಭೂಮಿ ಎನ್ನುವ ಅರಿವು ದೊರೆಯುತ್ತದೆ. ಇಲ್ಲಿ ನೆಲೆಸಿದರೆ ಖಂಡಿತವಾಗಿ ಏಳಿಗೆ ಸಾಧ್ಯ ಎಂದು ಊರು ನಿರ್ಮಾಣವಾಗುತ್ತದೆ. ನಂತರ ಮೈಸೂರು ಸಂಸ್ಥಾನದಿಂದ ಬಂದ ಒಕ್ಕಲಿಗ ಸಮುದಾಯವೂ ಇಲ್ಲಿ ನೆಲೆನಿಲ್ಲುತ್ತದೆ. ನಲ್ಲ ನಾಯಕನಿಂದ ಹುಟ್ಟಿಕೊಂಡ ಊರು ಕಾಲ ಕ್ರಮ ಕ್ರಮೇಣ ನಲ್ಲಹಳ್ಳಿಯಾಗಿ ಬದಲಾಗುತ್ತದೆ. ಈಗ ಸುಮಾರು 3500-4000 ಜನ ಸಂಖ್ಯೆ ಇರುವ ದೊಡ್ಡ ಗ್ರಾಮವಾಗಿ ಬೆಳೆದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಆಗಿದೆ.

ಗ್ರಾಮ ಕಾಯುವ ಮಾರಮ್ಮ

ನಲ್ಲಹಳ್ಳಿಯಲ್ಲಿ ಗ್ರಾಮ ದೇವತೆ ಮಾರಮ್ಮ. ಅನಾದಿ ಕಾಲದಿಂದಲೂ ಈ ಗ್ರಾಮವನ್ನು ಕಾಯುತ್ತಾ ಬಂದಿದ್ದಾಳೆ ಎನ್ನುವ ನಂಬಿಕೆ ಈಗಲೂ ಈ ಗ್ರಾಮದಲ್ಲಿ ಇದೆ. ಸುಮಾರು 500 ವರ್ಷಗಳ ಹಿಂದೆ ಜಮೀನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ವೇಳೆ ಒಡ್ಡನ್ನು ಸರಿಪಡಿಸುವಂತೆ ಆಳುಗಳಿಗೆ ಭೂ ಮಾಲೀಕ ಹೇಳುತ್ತಾರೆ. ಈ ವೇಳೆ ಅಡ್ಡ ಬಂದ ನಾಗರ ಹಾವೊಂದನ್ನು ಹೊಡೆದು ಹಾಕಲಾಗುತ್ತದೆ. ಹಾವು ಸಾಯಿಸಿದ ವ್ಯಕ್ತಿ ರಕ್ತ ಕಾರಿ ಸಾಯುತ್ತಾನೆ. ನಂತರ ಒಡ್ಡಿಗೆ ಗುದ್ದಲಿಯಿಂದ ಹೊಡೆದ ವ್ಯಕ್ತಿಯೂ ಸಾಯುತ್ತಾನೆ. ಇದರಿಂದ ಆತಂಕಗೊಂಡು ದೇವರ ಮೊರೆ ಹೋಗಲಾಗಿ

ದೇವಿಯನ್ನು ಪೂಜೆ ಮಾಡಿದರೆ ಅವಳು ನಿಮ್ಮನ್ನು ಕಾಯುತ್ತಾಳೆ ಎನ್ನುವ ಉತ್ತರ ದೊರೆಯುತ್ತದೆ. ಅಂದಿನಿಂದಲೂ ಈ ದೇವಿಯ ಪೂಜೆ ಮಾರಮ್ಮನ ರೂಪದಲ್ಲಿ ಆಗುತ್ತಿದೆ.

ಹಿಂದೆ ಬರುತ್ತಿದ್ದ ಪ್ಲೇಗ್, ಕಾಲರದಂತಹ ಸಾಂಕ್ರಾಮಿಕ ಸಂದ‘ರ್ದಲ್ಲಿ ಈಕೆಯ ಆಣತಿಯಂತೆಯೇ ಇಲ್ಲಿನ ಜನ ಬದುಕು ನಡೆಸುತ್ತಿದ್ದರು. ಆಕೆ ಬಲ ‘ಭಾಗಕ್ಕೆ ಹೂವು ಕೊಟ್ಟರೆ ಎಲ್ಲವೂ ಸುಸೂತ್ರ, ಇಲ್ಲವೇ ಸಂಕಷ್ಟ ಎನ್ನುವಂತೆ ಇರುತ್ತಿತ್ತು ಎಂದು ವಿವರಿಸುತ್ತಾರೆ ಗ್ರಾಮದ ಹಿರಿಯರಾದ ಚಿಕ್ಕಸ್ವಾಮಿಗೌಡ.

ಇನ್ನು ಇಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬ ಕಳೆದ 15 ದಿನಗಳಲ್ಲಿ ಮಾರಮ್ಮನ ಹಬ್ಬ ಮತ್ತು ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಜತೆಗೆ ಊರಿನಲ್ಲಿ ಮುತ್ತಪ್ಪನ ದೇವಾಲಯವೂ ಇದ್ದು, ಇದರ ಪೂಜೆಯೂ ಸಹ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಶಾಂತಿಯ ತೋಟ

ನಲ್ಲಹಳ್ಳಿ ಗ್ರಾಮದ ಸರ್ವ ಜನಾಂಗದ ಶಾಂತಿಯ ತೋಟ ಎಂದರೆ ತಪ್ಪಾಗಲಾರದು. ಇಲ್ಲಿ, ಒಕ್ಕಲಿಗ, ತಿಗಳ, ಅಗಸರು, ಶೆಟ್ಟರು, ಹೀಗೆ ಹಲವು ಸಮುದಾಯಗಳಿದ್ದು, ಎಲ್ಲರೂ ಒಗ್ಗಟ್ಟಿನಿಂದಲೇ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ರಾಮದಲ್ಲಿ ಪ್ರಮುಖವಾಗಿ ಕೃಷಿಯನ್ನೇ ಅವಲಂಭಿಸಿದ್ದು, ರೇಷ್ಮೆ ಮತ್ತು ಹೈನುಗಾರಿಕೆ ಇಲ್ಲಿ ಹೆಚ್ಚಾಗಿದೆ. ಗ್ರಾಮದ ಹಲವು ಮಂದಿ ಸರ್ಕಾರಿ ಶಾಲೆಯಲ್ಲಿಯೇ ಓದಿಕೊಂಡು ಉನ್ನತ ಹುದ್ದೆಗಳನ್ನು ಅವಲಂಬಿಸಿದ್ದಾರೆ. ಜಾತಿಗಳು ಎಷ್ಟೇ ಇದ್ದರೂ ಎಲ್ಲರೂ ಬಾಳ್ವೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್. ಅರ್ಕಾವತಿ ನದಿಯ ದಂಡೆಯ ಮೇಲೆ ಅಚ್ಚ ಹಸಿರಿನಿಂದ ಆವರಿಸಿರುವ ಊರು ಹೆಸರಿಗೆ ತಕ್ಕಂತೆ ನಲ್ಲಹಳ್ಳಿಯೇ ಆಗಿದೆ.

ನಲ್ಲಹಳ್ಳಿ ಹೆಸರಿಗೆ ತಕ್ಕಂತೆ ಸುಂದರವಾಗಿಯೇ ಇದೆ. ಇಲ್ಲಿ ಎಲ್ಲರೂ ಬಾಳ್ವೆ ನಡೆಸುತ್ತಿದ್ದು, ಕೃಷಿ ನಮ್ಮ ಜೀವನಾಧಾರವಾಗಿದೆ. ಜಗದೀಶ್, ಗ್ರಾಪಂ ಸದಸ್ಯ ===‘ನಲ್ಲ ನಾಯಕನೆಂಬ ಬೇಟೆಗಾರ ಮೊಲ ಬೇಟೆ ಈ ಗ್ರಾಮದ ಉದಯಕ್ಕೆ ಕಾರಣವಾಯಿತು. ಕಾಲ ಕ್ರಮೇಣ ಊರು ನಲ್ಲಹಳ್ಳಿ ಆಗಿದೆ. ನಮ್ಮೆಲ್ಲರನ್ನೂ ನಮ್ಮೂರ ತಾಯಿ ಮಾರಮ್ಮ ಕಾಯುತ್ತಿದ್ದಾಳೆ. ಚಿಕ್ಕಸ್ವಾಮಿಗೌಡ, ಗ್ರಾಮದ ಹಿರಿಯರು ---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net