ಕೈಗಾರಿಕೆ ಸ್ಪಾಪನೆ ಪ್ರಕ್ರಿಯೆ ಪೂರ್ಣ

FotoJet (2)
Published on

2ನೇ ಹಂತದ ಭೂಸ್ವಾಧೀನ ಮುಗಿಯುತ್ತಿದ್ದಂತೆ ಆರಂಭ | ಸಚಿವ ಎಂ.ಸಿ. ಸುಧಾಕರ್ ಭರವಸೆ

ಬಾಗೇಪಲ್ಲಿ : ಪಟ್ಟಣಕ್ಕೆ ಹೊಂದಿಕೊಂಡಿರುವ ಜಮೀನುನಲ್ಲಿ ಕೈಗಾರಿಕೆ ಸ್ಥಾಪನೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದು, ರೈತರಿಗೆ ಪರಿಹಾರ ಕಲ್ಪಿಸಿ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶಾಸಕ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಕೈಗಾರಿಕೆ ಸ್ಥಾಪನೆಗೊಂಡು ಈ ಭಾಗದ ಯುವಕ, ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದರು.

ಪಟ್ಟಣದಲ್ಲಿ ಶನಿವಾರ ರೈತ ಸಂಘಟನೆ ಸೇರಿ ನಾಗರಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿ, ಬಾಗೇಪಲ್ಲಿ ಬಳಿ ಕೈಗಾರಿಕೆ ಸ್ಥಾಪಿಸುವ ಯೋಜನೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತ್ತು, ಅದರೆ ಶಾಸಕ ಸುಬ್ಬಾರೆಡ್ಡಿ ಅವರ ದೂರದೃಷ್ಟಿ ಹಾಗೂ ಜನರ ಬಗ್ಗೆ ಬದ್ಧತೆ ಇರುವುದರಿಂದ ಕೈಗಾರಿಕೆ ಸ್ಥಾಪನೆಗೆ ಬೇಕಾಗಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪಾತಪಾಳ್ಯ ಸಮೀಪದ ಘಂಟ್ಲಮಲ್ಲಮ್ಮ ಕಣಿವೆ ಬಳಿ ಉದ್ದೇಶಶಿತ ಅಣೆಕಟ್ಟು ನಿರ್ಮಾಣಕ್ಕೆ 180 ಕೋಟಿ ರೂ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವು ಅಭಿವೃದ್ದಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದ್ದರೂ ವಿರೋಧ ಪಕ್ಷದ ನಾಯಕರು ಟೀಕೆ ಮಾಡುವುದು ಸರಿಯಲ್ಲ ಎಂದರು.

ಇ-ಖಾತೆಗೆ ಮನವಿ

ಬಾಗೇಪಲ್ಲಿ ತಾಲೂಕಿನ ಪರಗೋಡು, ಘಂಟಂವಾರಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೊಳ್ಳದ ನಿವೇಶನ, ಮನೆಗಳಿಗೆ ಇಖಾತೆ ಮಾಡಿಕೊಡುವಂತೆ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ನಾಗರಿಕರು ಮನವಿ ಸಲ್ಲಿಸಿದರು. ಸರ್ಕಾರ ಈಗಾಗಲೇ ಇದರ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು ನಗರಸಭೆ, ಪುರಸಭೆ ಮಾದರಿಯಲ್ಲೇ ಗ್ರಾಪಂಗಳಲ್ಲಿಯೂ ಬಿಖಾತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಆಟಲ್ ಭೂಜಲ ಅಕ್ರಮ ತನಿಖೆಗೆ ಒತ್ತಾಯ

ಅಟಲ್ ಭೂಜಲ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ, 50 ಲಕ್ಷ ರೂ. ವೆಚ್ಚದ 22 ಕಾಮಗಾರಿಗಳನ್ನು ರಾಜಕೀಯ ಬಲಾಢ್ಯರಿಗೆ ಮಂಜೂರು ಮಾಡಿರುವ ವಿಚಾರದಲ್ಲಿ ಗೋಲ್‌ಮಾಲ್ ನಡೆದಿದ್ದು, ಈ ಬಗ್ಗೆ ದಾಖಲೆ ಸಮೇತ ಜಿಲ್ಲಾಧಿಕಾರಿ ಹಾಗೂ ಯೋನಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ತನಿಖೆ ನಡೆಸಿಲ್ಲ. ಈ ಯೋಜನೆಯಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಯ ಅವ್ಯವಹಾರ ತನಿಖೆ ನಡೆಸುವಂತೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು, ಮನವಿ ಸ್ವೀಕರಿಸಿದ ಸಚಿವರು ದಾಖಲೆ ನೀಡಿದರೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಸೀಲ್ದಾರ್ ಮನೀಷಾ ಎನ್. ಪತ್ರಿ, ತಾಲೂಕು ಪಂಚಾಯತಿ ಇಒ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net