ಹೊಸ ಸರ್ಕಾರ ಬಂದರೂ ಬಗೆಹರಿಯದ ಔಷಧ ಪೂರೈಕೆದಾರರ ಸಮಸ್ಯೆ

ksmscl
Published on

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಪದೇಪದೆ ಉಂಟಾಗುವ ಔಷಧ ಅಭಾವ ತಡೆಗೆ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(ಕೆಎಸ್‌ಎಂಎಸ್‌ಸಿಎಲ್) ಪುನಶ್ಚೇತನಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಔಷಧ ದಾಸ್ತಾನಿಗೆ ವಾರ್ಷಿಕ ಟೆಂಡರ್ ಬದಲಿಗೆ ಎರಡು ವರ್ಷಕ್ಕೊಮ್ಮೆ ಟೆಂಡರ್ ಕರೆಯುವುದು, ಔಷಧ ಪೂರೈಕೆ ಪ್ರಕ್ರಿಯೆಯಲ್ಲಿ ಕೆಲ ಹೊಸ ನಿಯಮ ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ, ರಾಜ್ಯದಲ್ಲಿ ಹೊಸ ಸರ್ಕಾರ ಬಂದರೂ ಕೋಟ್ಯಂತರ ರೂ. ಮೌಲ್ಯದ ಔಷಧ ಮತ್ತು ವೈದ್ಯಕೀಯ ಉಪಕರಣ ಪೂರೈಸಿರುವ ಕಂಪನಿಗಳಿಗೆ ಹಣ ಪಾವತಿಸುವ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಶೇ.100 ಔಷಧ ಸರಬರಾಜು ಮಾಡಿರುವ ಕಂಪನಿಗಳಿಗೆ ಪೇಮೆಂಟ್‌ವಾಗಿಲ್ಲ. ಆನ್‌ಲೈನ್‌ನಲ್ಲಿ ಎಲ್ಲ ಬಿಲ್‌ಗಳು ಲಭ್ಯವಿದ್ದರೂ ಬೇಕಾಂತಲ್ಲೇ ಅಧಿಕಾರಿಗಳು ಪೇಮೆಂಟ್ ಮಾಡುತ್ತಿಲ್ಲ. 2012ರಿಂದ ಉಳಿದಿರುವ ಬಾಕಿ ಔಷಧ ಬಿಲ್‌ಗಳ ಜತೆಗೆ ಕೋಟ್ಯಂತರ ರೂ. ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. ಇವುಗಳನ್ನು ಕ್ಲೀಯರ್ ಮಾಡುತ್ತಿಲ್ಲ. ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್‌ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಔಷಧ ಪೇಮೆಂಟ್‌ಯಾಗುತ್ತಿದೆ. ಔಷಧ ನಿಗಮದಲ್ಲಿ ನಿಗದಿತ ಸಮಯಕ್ಕೆ ಔಷಧ ಬಿಲ್‌ಗಳಿಗೆ ಹಣ ಪಾವತಿಯಾಗುತ್ತಿಲ್ಲ. ಬಿಡ್ಡರ್ ಟೆಂಡರ್‌ನಲ್ಲಿ ಭಾಗವಹಿಸಿದಾಗ ಇಲಾಖೆ ಅರ್ನೆಸ್ಟ್ ಮನಿ ಡೆಪಾಸಿಟ್‌ನ್ನು ಸಂಗ್ರಹಿಸುತ್ತದೆ. ಟೆಂಡರ್‌ನಲ್ಲಿ ಎಲ್1ಗೆ ಆಯ್ಕೆಯಾದ ಬಿಡ್ಡರ್, ಭದ್ರತಾ ಠೇವಣಿಯನ್ನು ಇಲಾಖೆಗೆ ಸಲ್ಲಿಸಿದ ನಂತರ ಕೆಟಿಪಿಪಿ ಕಾಯ್ದೆ ಪ್ರಕಾರ ಅವರಿಗೆ ಮರುಪಾವತಿಸಬೇಕು. ರದ್ದಾದ ಮತ್ತು ಮತ್ತೆ ಟೆಂಡರ್ ನಡೆಸಿದ್ದ ಬಳಿಕವೂ ಬಿಡ್ಡರ್‌ಗೆ ಭದ್ರತಾ ಠೇವಣಿ ಮತ್ತು ಇಎಂಡಿ ಮರು ಪಾವತಿಸುತ್ತಿಲ್ಲ.

ಅನುದಾನ ಬಿಡುಗಡೆಯಾಗಿಲ್ಲ: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ‘ನಮ್ಮ ಕ್ಲಿನಿಕ್’ಗಳಿಗೆ ಅಂದಾಜು 30ರಿಂದ 40 ಕೋಟಿ ರೂ.ಮೌಲ್ಯದ ಔಷಧ ಮತ್ತು ವೈದ್ಯಕೀಯ ಉಪಕರಣ ಸರಬರಾಜು ಮಾಡಲಾಗಿದೆ. ಆದರೆ, ಐದಾರು ತಿಂಗಳಿಂದ ಇವುಗಳಿಗೆ ಪೇಮೆಂಟ್‌ವಾಗಿಲ್ಲ. ಆರೋಗ್ಯ ಇಲಾಖೆಯಿಂದ ನಿಗಮಕ್ಕೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ನಿಗಮದಲ್ಲಿ 90 ಕೋಟಿ ರೂ. ಔಷಧ, 40 ಕೋಟಿ ರೂ. ವೈದ್ಯಕೀಯ ಉಪಕರಣ ಸೇರಿ ಒಟ್ಟು 130 ಕೋಟಿ ರೂ.ಬಿಲ್‌ಗಳು ಬಾಕಿ ಉಳಿದಿವೆ. ಬಿಲ್‌ಗಳ ಕ್ಲಿಯರ್ ಮಾಡಲು ನಿಗಮ ಇಲಾಖೆ ನಿರಾಸಕ್ತಿ ತೋರುತ್ತಿದೆ.

ನಮ್ಮನ್ನು ಕೇಳಬೇಡಿ: ನಿಗಮದಲ್ಲಿ ಕಮಿಷನ್ ದಂಧೆ, ಭ್ರಷ್ಟಾಚಾರ ಮೀತಿಮೀರಿದೆ. ಬಾಕಿ ಔಷಧ ಬಿಲ್‌ಗಳು ಪಾವತಿಗೆ, ಭದ್ರತಾ ಠೇವಣಿ, ಇಎಂಡಿ ಹಣ ವಾಪಸಾತಿಗೆ ಕೆಲವರು ಕಮಿಷನ್ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಸಲ್ಲಿಕೆಯಾದ ಬಿಲ್‌ಗಳನ್ನು ಕೆಲ ಅಧಿಕಾರಿಗಳು ಬೇಕಾಂತಲ್ಲೇ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರ ಬಗ್ಗೆ ವಿಚಾರಿಸಿದ್ದರೆ ನಮ್ಮನ್ನು ಕೇಳಬೇಡಿ ಎಂದು ಅಧಿಕಾರಿಗಳು ಗದರುತ್ತಾರೆ ಎಂದು ಹೆಸರಲಿಚ್ಚಿಸದ ಕಂಪನಿಯವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net