ಗುಂಡಿಗಳನ್ನು ಮುಚ್ಚದಿರುವುದೇ ಸಮಸ್ಯೆ

20BTP01
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಿಂದ ಕಿತ್ತೂರು ಮಾರ್ಗವಾಗಿ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಾಯ್ತೆರಿದಿರುವ ಗುಂಡಿಗಳಿಂದ ವಾಹನ ಸವಾರರನ್ನು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಭಯದಲ್ಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಬೆಟ್ಟದಪುರದ ಹರದೂರು ಗೇಟ್ ಬಳಿಯ ಮುಖ್ಯರಸ್ತೆಯಲ್ಲಿ ಜೆಜೆಎಂ(ಜಲಜೀವನ್ ಮಿಷನ್) ಕಾಮಗಾರಿಗೆ ಡಾಂಬರು ರಸ್ತೆಯನ್ನು ಅಗೆಯಲಾಗಿತ್ತು. ಆದರೆ, ಕಾಮಗಾರಿ ಬಹುತೇಕ ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ಗುಂಡಿಗಳಿಗೆ ಮುಕ್ತಿ ನೀಡದ ಪರಿಣಾಮ ಒಂದಲ್ಲ ಒಂದು ಸಮಸ್ಯೆಗಳು ನಿತ್ಯ ಉಂಟಾಗುತ್ತಿವೆ.

ಜಲಜೀವನ ಮಿಷನ್ ಕಾಮಗಾರಿ ಸಂದರ್ಭ ಒಂದು ಬದಿಯಿಂದ ಮತ್ತೊಂದು ಬದಿಗೆ ಪೈಪ್‌ಲೈನ್ ಅಳವಡಿಕೆ ಮಾಡುವಾಗ ಡಾಂಬರೀಕರಣಗೊಂಡ ರಸ್ತೆಯನ್ನೇ ಅಡ್ಡಲಾಗಿ ಅಗೆದು ಪೈಪ್‌ಲೈನ್ ಮಾಡಲಾಗಿದೆ. ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಕೆಲಸ ಮುಗಿಸಿದ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿ ಡಾಂಬರೀಕರಣ ಮಾಡದ ಕಾರಣ ಅವ್ಯವಸ್ಥೆಯಾಗಿದೆ.

ಪ್ರಮುಖ ರಸ್ತೆಯಲ್ಲೇ ಅಧ್ವಾನ

ಬೆಟ್ಟದಪುರ ಮಾರ್ಗವಾಗಿ ಕಿತ್ತೂರು, ಹೊಸೂರು, ಚುಂಚನಕಟ್ಟೆ, ಕೆ.ಆರ್.ನಗರ ಸೇರಿದಂತೆ ಹಲವಾರು ಗ್ರಾಮ, ಪಟ್ಟಣಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಬೆಟ್ಟದಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಹಿನ್ನೆಲೆ ನಿತ್ಯ ಇಲ್ಲಿಗೆ ಸಾವಿರಾರು ಜನರು ವಾಣಿಜ್ಯ ವಹಿವಾಟು ಜತೆಗೆ ವಿವಿಧ ಕೆಲಸ ನಿಮಿತ್ತ ಬರುತ್ತಾರೆ. ಈ ರೀತಿಯಲ್ಲಿ ಜೆಜೆಎಂ ಕಾಮಗಾರಿಯಿಂದ ತೆಗೆದ ಗುಂಡಿಗಳಿಂದ ಅಪಾಯ ತಪ್ಪಿದ್ದಲ್ಲ. ಸವಾರರು ಒಂದು ಕ್ಷಣ ಎಚ್ಚರ ತಪ್ಪಿದರೂ, ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಪ್ರಮುಖ ರಸ್ತೆಯಲ್ಲಿಯೇ ಸಮಸ್ಯೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳ ಜಾಣಕುರುಡು ಪ್ರದರ್ಶನಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net