

* ಬಿಎಸ್ಡಬ್ಲುಎಂಎಲ್ ಸಿಇಒ ಕರೀಗೌಡ ಹೇಳಿಕೆ
* ಕಸದಿಂದ ವಿದ್ಯುತ್ ಉತ್ಪಾದಿಸುವ ಟಕಕ್ಕೆ ಭೇಟಿ
ಬಿಡದಿ
ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಒಣ ಕಸ ಬೇರ್ಪಡಿಸಿ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಕಳುಹಿಸಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ (ಬಿಎಸ್ಡಬ್ಲುಎಂಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಹೇಳಿದರು.
ಬಿಡದಿಯಲ್ಲಿ ರಾಜ್ಯ ವಿದ್ಯುತ್ ನಿಗಮ (ಕೆಪಿಸಿಎಲ್) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಂಟಿಯಾಗಿ ಸ್ಥಾಪಿಸಿರುವ ಒಣ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಅಧಿಕಾರಿಗಳ ತಂಡದ ಜತೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು.
ಜನರು ಕಸವನ್ನು ಬೇರ್ಪಡಿಸದೆ ಹಾಕುತ್ತಾರೆ. ಇದರಿಂದ ಸಮಸ್ಯೆ ಹೆಚ್ಚುತ್ತದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟಕಕ್ಕೆ ನಿತ್ಯ 600 ಮೆಟ್ರಿಕ್ ಟನ್ ಒಣ ಕಸದ ಅವಶ್ಯಕತೆಯಿದ್ದು, ಸದ್ಯಕ್ಕೆ 200 ಮೆಟ್ರಿಕ್ ಟನ್ ಒಣ ಕಸ ಮಾತ್ರ ಬರುತ್ತಿದೆ. ಹಾಗಾಗಿ ಈ ತಿಂಗಳಲ್ಲಿ 500 ಮೆಟ್ರಿಕ್ ಟನ್ ಒಣ ಕಸ ಬೇರ್ಪಡಿಸಿ ಕಳುಹಿಸಿ ಕೊಡುವ ಗುರಿ ಹೊಂದಿದ್ದೇವೆ. ಈಗಾಗಲೇ ಜಮೀನುಗಳಲ್ಲಿ ಹಾಕಿರುವ ಕಸವನ್ನು ಜರಡಿ ಹಿಡಿದು ಸಿಕ್ಕ ಪುಡಿಯನ್ನು ಗೊಬ್ಬರ ಉತ್ಪಾದನೆಗೆ ಕಳುಹಿಸಿ ಇನ್ನು ಉಳಿದ ಪ್ಲಾಸ್ಟಿಕ್ ಸೇರಿ ಇತರ ವಸ್ತುಗಳನ್ನು ವಿದ್ಯುತ್ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಕೆಪಿಸಿಎಲ್ನ ಇಇ ಸತೀಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ರಥಮವಾಗಿ ಒಣ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು 2000ದಲ್ಲಿ ಪ್ರಾರಂಭಿಸಲಾಯಿತು. ಬಿಡದಿ ಘಟಕವು 2024ರಲ್ಲಿ ಉತ್ಪಾದನೆ ಆರಂಭಿಸಿದ್ದು 4,200 ಮೆಟ್ರಿಕ್ ಟನ್ ಕಸವನ್ನ ಸಂಗ್ರಹಿಸಿಟ್ಟುಕೊಳ್ಳುವ ಟ್ಯಾಂಕ್ ಈ ಘಟಕದಲ್ಲಿದೆ. ಘಟಕದಲ್ಲಿ ಪ್ರತಿದಿನ 11 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯಾದ ವಿದ್ಯುತ್ ಅನ್ನು ಅಂಡರ್ ಕೇಬಲ್ ಮೂಲಕ 4 ಕಿ.ಮೀ. ದೂರದಲ್ಲಿರುವ 66 ಕೆವಿ ವಿದ್ಯುತ್ ಸ್ಟೇಷನ್ಗೆ ಸರಬರಾಜು ಮಾಡಲಾಗುತ್ತಿದೆ. ಸದ್ಯ ಕಸದಿಂದ ಉತ್ಪತ್ತಿಯಾಗುತ್ತಿರುವ ವಿದ್ಯುತ್ ಅನ್ನು ಪ್ರತಿ ಮನೆಗೆ 5 ಕಿಲೋ ವ್ಯಾಟ್ನಂತೆ 25 ಸಾವಿರ ಮನೆಗಳಿಗೆ ನಿತ್ಯವೂ ವಿದ್ಯುತ್ ಪೂರೈಸಬಹುದಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸವನ್ನು ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿಯಲ್ಲಿ ನಿಗದಿ ಮಾಡಿರುವ ಜಮೀನಿಗೆ ಹೋಗುತ್ತಿದೆ. ಉಳಿದಂತೆ 7 ತ್ಯಾಜ್ಯ ನಿರ್ವಹಣೆ ಟಕ ಹಾಗೂ ದೊಡ್ಡಬಳ್ಳಾಪುರದ ಒಂದು ಖಾಸಗಿ ತ್ಯಾಜ್ಯ ನಿರ್ವಹಣೆ ಟಕಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಬೇರ್ಪಡಿಸಿದ ಒಣ ಕಸವನ್ನು ಬಿಡದಿ ಟಕಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಕರೀಗೌಡ ಮಾಹಿತಿ ನೀಡಿದರು.
ಕಸದಿಂದ ವಿದ್ಯುತ್ ಉತ್ಪಾದಿಸುವ ಇನ್ನೆರಡು ಘಟಕಗಳನ್ನು ಬೆಂಗಳೂರು ದಕ್ಷಿಣ ಹಾಗು ಉತ್ತರ ಭಾಗದಲ್ಲಿ ಸ್ಥಾಪಿಸಲು ದೊಡ್ಡಬಳ್ಳಾಪುರ ಹಾಗೂ ಗೊಲ್ಲಹಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಕೆಪಿಸಿಲ್ ಹಾಗೂ ಜಿಬಿಎ ಸಹಭಾಗಿತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು, ಅದೇ ರೀತಿ ಇನ್ನೆರಡು ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.ಕರೀಗೌಡ, ಸಿಇಒ, ಬಿಎಸ್ಡಬ್ಲುಎಂಎಲ್