ಅವೈಜ್ಞಾನಿಕ ಯುಜಿಡಿ ವ್ಯವಸ್ಥೆ ತಂದ ಸಮಸ್ಯೆ

FotoJet
Published on

ಮಳೆ-ಒಳಚರಂಡಿ ನೀರು ಮಿಶ್ರಣ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಜಾಣಕುರುಡು

ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಒಳಚರಂಡಿ (ಯುಜಿಡಿ) ವ್ಯವಸ್ಥೆಯಿಂದಾಗಿ ಮಳೆ ನೀರು ಮತ್ತು ಶೌಚಗೃಹ ನೀರು ಮಿಶ್ರಣವಾಗುತ್ತಿದ್ದು ಜತೆಗೆ ನೀರಿನ ಪೋಲು ಮತ್ತು ಅನೈರ್ಮಲ್ಯ ಸಮಸ್ಯೆಯೂ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.

ಹೌದು, ಜಿಲ್ಲಾ ಕೇಂದ್ರದಲ್ಲಿ ಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಕೆಲವೆಡೆ ಸಾಮಾನ್ಯ ಚರಂಡಿಗೆ ಯುಜಿಡಿ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಇದರ ಬಗ್ಗೆ ಸಭೆಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಆದರೂ ಸೂಕ್ತ ಕ್ರಮ ಕೈಗೊಳ್ಳುವ ಕೆಲಸವಾಗುತ್ತಿಲ್ಲ. ಸ್ಥಳೀಯ ನಗರಸಭೆ ಸದಸ್ಯರು ಮತ್ತು ಜನರ ಕೂಗನ್ನು ಕೇಳಿಸಿಕೊಳ್ಳದ ಅಧಿಕಾರಿಗಳು, ಸ್ವಚ್ಛ ಭಾರತ್ ಅಭಿಯಾನದ ಸಾಧನೆಯ ಪ್ರಚಾರದಲ್ಲಿ ಮುಳುಗಿದ್ದಾರೆ. ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಅವ್ಯವಸ್ಥೆ: ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡುಗಳಿದ್ದು, ಅಂದಾಜು 68 ಸಾವಿರ ಜನಸಂಖ್ಯೆ ಹೊಂದಿದೆ. ಹಳೇ ಪ್ರದೇಶಗಳಲ್ಲಿ ಕಟ್ಟಡ, ಚರಂಡಿ, ರಸ್ತೆಗಳು ಯೋಜನಾ ಪ್ರಾಧಿಕಾರದ ನಿಯಮಾನುಸಾರ ನಿರ್ಮಾಣವಾಗಿಲ್ಲ. ಕಿರಿದಾದ ಇಕ್ಕಟ್ಟಿನ ಜಾಗಗಳೇ ಹೆಚ್ಚು. ಒಂದು ಕಡೆ ಪ್ರಾರಂಭವಾದ ಚರಂಡಿಗೆ ಮತ್ತೊಂದು ಕಡೆ ಸಂಪರ್ಕ ಇಲ್ಲ. ಹಲವೆಡೆ ಮುಚ್ಚಿಹೋಗಿವೆ. ಇದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಕೊಳೆಗೇರಿ ಪ್ರದೇಶಗಳಲ್ಲಿ ಯುಜಿಡಿ ಇ್ಲ. ಬಹುತೇಕ ಮನೆಗಳ ಶೌಚಗೃಹ ತ್ಯಾಜ್ಯ ನೇರವಾಗಿ ಚರಂಡಿಗೆ ಸೇರುತ್ತಿದೆ. ಇನ್ನು ವಾಪಸಂದ್ರ, ಗಂಗನಮಿದ್ದೆ, ಸರಎಂವಿ ಬಡಾವಣೆ, ಜೈಭೀಮ್ ಬಡಾವಣೆ, ದಿನ್ನೇಹೊಸಹಳ್ಳಿ ರಸ್ತೆ, ಕಾರ್ಖಾನೆ ಪೇಟೆ, ಎಲೆಪೇಟೆಗಳಲ್ಲಿ ಒಳಚರಂಡಿ ಕಟ್ಟಿಕೊಂಡು ಮ್ಯಾನ್‌ಹೋಲ್ಗಳಿಂದ ತ್ಯಾಜ್ಯನೀರು ರಸ್ತೆಗೆ ಉಕ್ಕಿ ಹರಿಯುತ್ತಿದೆ. ಇದಕ್ಕೆ ಪೈಪ್‌ಲೈನ್ ಅಳವಡಿಕೆ ಮತ್ತು ಚರಂಡಿ ನಿರ್ಮಾಣದಲ್ಲಿನ ಲೋಪವೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಆಯಾ ವಾರ್ಡ್‌ಗಳಲ್ಲಿಯೇ ಪರಿಹಾರ

ಆಯಾ ವಾರ್ಡ್‌ಗಳಲ್ಲಿ ಸಂಬಂಧಪಟ್ಟ ನಗರಸಭೆ ಸದಸ್ಯರು ಮತ್ತು ವ್ಯಾಪ್ತಿಯ ಉಸ್ತುವಾರಿ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳು, ನಿರೀಕ್ಷೆಯ ಪರಿಹಾರ ಕೆಲಸಗಳ ಬಗ್ಗೆ ಯೋಜನೆ ರೂಪಿಸಬಹುದು. ಆದರೆ, ಬಹುತೇಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ. ಅವೈಜ್ಞಾನಿಕ ಕೆಲಸಗಳ ಯೋಜನೆ ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದರ ಬಗ್ಗೆ ಆರೋಪ - ಪ್ರತ್ಯಾರೋಪಗಳು ಕೇಳಿ ಬರುತ್ತವೆ. ಕೆಲಸ ಮುಗಿದ ಬಳಿಕ ಲೋಪಗಳು ಗೊತ್ತಾಗುವವರೆಗೂ ಎಚ್ಚೆತ್ತುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಪರಸ್ಪರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವಾಗುತ್ತಿದೆ.

ಕಲುಷಿತ ನೀರು ನೇರ ಕೆರೆಗೆ

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ನಗರದ ಯುಜಿಡಿ ನೇರವಾಗಿ ಅಮಾನಿ ಗೋಪಾಲಕೃಷ್ಣ ಕೆರೆಗೆ ಹರಿಯು ತ್ತಿರುವುದರ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನಿರಂತರವಾಗಿ ಘಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಸಂಗ್ರಹ, ಕಾಲಕಾಲಕ್ಕೆ ಸಂಸ್ಕರಣೆ ಯಾಗದಿರುವುದು, ವೈಜ್ಞಾನಿಕ ರೀತಿಯಲ್ಲಿ ಮರುಬಳಕೆಗೆ ಕ್ರಮ ಕೈಗೊಳ್ಳದಿರುವ ಅಸಡ್ಡೆ ಧೋರಣೆಯನ್ನು ತೋರಿದ್ದು ಇದೀಗ ಅಸಹಾಯಕತೆ ತೋರಲಾಗುತ್ತಿದೆ. ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಕ್ಕೆ ಪರ್ಯಾಯವಾಗಿ ಹೊಸ ಜಾಗದಲ್ಲಿ ಮತ್ತೊಂದು ಘಟಕ ನಿರ್ಮಾಣ, ಯುಜಿಡಿ ಪೈಪ್‌ಲೈನ್ ಅಳವಡಿಕೆ ಸೇರಿ ಇತರ ಕಾಮಗಾರಿಗೆ 30 ಕೋಟಿ ರೂ. ಮಂಜೂರಾಗಿದ್ದು, ಡಿಪಿಆರ್ ತಯಾರಾಗಿದೆ. ವಾಪಸಂದ್ರ, ದಿನ್ನೇಹೊಸಹಳ್ಳಿ ರಸ್ತೆ, ಕಂದವಾರ, ಪ್ರಶಾಂತ ನಗರದಲ್ಲಿ ಕಾಮಗಾರಿ ಸೇರ್ಪಡೆಯ ಚರ್ಚೆಯಾಗಿದ್ದು, ಸ್ಥಳೀಯ ನಗರಸಭೆ ಸದಸ್ಯರ ಸಲಹೆಯಂತೆ ಘಟಕಕ್ಕೆ ಹೊಸ ಜಾಗ ಗುರುತಿಸಲಾಗುತ್ತಿದೆ. ಇಲ್ಲಿ ಕಾಮಗಾರಿ ಮುಗಿದು, ಹಾಗೆಯೇ ನಿರ್ವಹಣೆ ಪ್ರಾರಂಭಕ್ಕೆ ಚಾಲನೆ ನೀಡಲು ತಿಂಗಳಾನುಗಟ್ಟಲೇ ಸಮಯ ಬೇಕಾಗುತ್ತದೆ. ಇದರ ನಡುವೆ ಯುಜಿಡಿ ನೀರು ನೇರವಾಗಿ ಕೆರೆಗೆ ಹರಿಯುವುದನ್ನು ತಡೆಯುವ ನಿಟ್ಟಿನಲ್ಲಿ ಗಮನಹರಿಸುತ್ತಿಲ್ಲ. ಇದರಿಂದ ಅನೇಕ ತಲೆಮಾರುಗಳಿಂದ ಸಂರಕ್ಷಣೆ ಮಾಡಿಕೊಂಡು ಬಂದಿದ್ದ ನಗರದ ಪ್ರಮುಖ ಜಲಮೂಲ ಕಲುಷಿತಗೊಳ್ಳುತ್ತಿದ್ದು ಬಳಕೆಗೆ ಯೋಗ್ಯವಲ್ಲ ಎನ್ನುವಂತಹ ದುಸ್ಥಿತಿ ತಲುಪಿದೆ.

ಪ್ರಚಾರ, ಅನುದಾನ ವ್ಯರ್ಥ

ಚಿಕ್ಕಬಳ್ಳಾಪುರವನ್ನು ಸಿಂಗಾಪುರವನ್ನಾಗಿ ಅಭಿವೃದ್ಧಿಪಡಿಸುವ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ನೀರಿನ ಸಂರಕ್ಷಣೆ ಮತ್ತು ಮಿತ ಬಳಕೆ, ಪ್ಲಾಸ್ಟಿಕ್‌ಮುಕ್ತ ನಗರವಾಗಿ ಪರಿವರ್ತನೆ ಸೇರಿ ಕ್ರಾಂತಿಕಾರಿ ಹೊಸ ಯೋಜನೆಗಳ ಘೋಷಣೆಗೆ ಲೆಕ್ಕವಿಲ್ಲ. ಇದಕ್ಕೆ ತಿಂಗಳಾನುಗಟ್ಟಲೇ ಪ್ರಚಾರ, ಸರ್ಕಾರದ ಅನುದಾನ ಹೆಚ್ಚಿನ ಖರ್ಚು. ಆದರೆ, ಯೋಜನೆಯ ಪೂರ್ಣ ಉದ್ದೇಶ ಸಾಧನೆ ಮಾತ್ರ ಕಾಣುವುದಿಲ್ಲ. ಆಡಳಿತ ಯಂತ್ರದ ಅಸಡ್ಡೆ ಧೋರಣೆ, ಬೇಸತ್ತ ಜನರಿಂದ ಅಸಹಕಾರ ತೋರುವುದು ಸಾಮಾನ್ಯ ಎನಿಸಿಬಿಟ್ಟಿದೆ.

"ಕೆಲ ವಾರ್ಡ್‌ಗಳಲ್ಲಿ ಮಳೆ ನೀರು ಮತ್ತು ಯುಜಿಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ." - ನೇತ್ರಾವತಿ ನಗರಸಭೆ ಸದಸ್ಯೆ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net