

ಬೆಂಗಳೂರು: ಸಾಂಪ್ರದಾಯಿಕ ವಜ್ರಾಭರಣಗಳಿಗೆ ಮನೆ ಮಾತಾಗಿರುವ ‘ನವರತನ್ ಜುವೆಲ್ಲರ್ಸ್’ ಹಾಗೂ 'ವಿಜಯವಾಣಿ', 'ದಿಗ್ವಿಜಯ 24*7 ನ್ಯೂಸ್' ಸಹಯೋಗದಲ್ಲಿ ಆಯೋಜಿಸಿರುವ ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಶುಕ್ರವಾರ ದೀಪ ಬೆಳಗುವ ಮೂಲಕ ನಟಿ ರಚಿತಾ ರಾಮ್ ಚಾಲನೆ ನೀಡಿದರು.
ರಾಜಾಜಿನಗರದ ನವರತನ್ ಜುವೆಲ್ಲರ್ಸ್ ಮಳಿಗೆಯಲ್ಲಿ ಮೂರು ದಿನಗಳ ಕಾಲ ದಿ ಪ್ರಿನ್ಸೆಸ್ ಫ್ಯಾಷನ್ ಶೋ ಕಾರ್ಯಕ್ರಮ ನಡೆಯುತ್ತಿದ್ದು, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜತೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು. ನೆರೆದಿದ್ದ ಕೆಲ ವೀಕ್ಷಕರೂ ರ‍್ಯಾಂಪ್ ಮೇಲೆ ವಾಕ್ ಮಾಡಿ ಸಾಥ್ ನೀಡಿದರು.
ನವರತನ್ ಜುವೆಲ್ಲರ್ಸ್ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಜತೆಗೆ ವಜ್ರದ ಮಹತ್ವವನ್ನು ಎಲ್ಲರಿಗೂ ತಿಳಿಸುವುದೂ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮೂರು ದಿನದ ಕಾರ್ಯಕ್ರಮದಲ್ಲಿ 30 ರೂಪದರ್ಶಿಯರು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದು, ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶಗಳು ಒದಗಲಿ ಎಂದು ಹಾರೈಸಿದರು.
ಸನ್ಮಾನ: ವಿಜಯವಾಣಿ ದಿನಪತ್ರಿಕೆಯ ಸಂಪಾದಕ ಕೆ.ಎನ್.ಚೆನ್ನೇಗೌಡ, ವಿಜಯವಾಣಿ ಮೀಡಿಯಾ ಲಿ.ಉಪಾಧ್ಯಕ್ಷ ಅರುಣ್ ಕರಡಿ, ನಟಿ ರಚಿತಾ ರಾಮ್ ನಿರ್ವಪಕ ರಾಕ್ಲೈನ್ ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನವರತನ್ ಜುವೆಲ್ಲರ್ಸ್ನ ಸಹ ವ್ಯವಸ್ಥಾಪಕ ನಿರ್ದೇಶಕ (ಜೆಎಂಡಿ) ನಿರ್ಮಲ್ ಕುಮಾರ್, ನಿರ್ದೇಶಕರಾದ ಅಶೋಕ್ ಕುಮಾರ್, ಮಿತೇಶ್ ಬಾಪ್ನಾ, ವಿನೋದ್ ಕುಮಾರ್, ಸಿಎಫ್ಒ ಗ್ಯಾನ್ ಚಂದ್ ಮತ್ತಿತರರು ಉಪಸ್ಥಿತರಿದ್ದರು.