ಉಚಿತ ಪ್ರಯಾಣದ ಶಕ್ತಿ ನಿಲ್ಲಲ್ಲ

Published on

ಸಚಿವ ಸುಧಾಕರ್ ಸ್ಪಷ್ಟನೆ ಬಿಜೆಪಿಯ ಗೊಂದಲ ಹೇಳಿಕೆ ಸರಿಯಲ್ಲ

ಚಿಕ್ಕಬಳ್ಳಾಪುರ: ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ೋಷಣೆ, ಅನುಷ್ಠಾನ ಸೇರಿ ಪ್ರತಿ ಹಂತದಲ್ಲೂ ಬಿಜೆಪಿ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಅನುದಾನದ ಕೊರತೆ ಮತ್ತು ಯೋಜನೆ ಅನುಷ್ಠಾನ ಅಸಾಧ್ಯ ಎಂಬ ಅಪಸ್ವರದ ನಡುವೆಯೂ ಸರ್ಕಾರವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದರು.

ಅನೇಕ ಮಹಿಳೆಯರು ಹಣ ಕೊಟ್ಟು ಬಸ್‌ನಲ್ಲಿ ಪ್ರಯಾಣಿಸುವ, ಶಕ್ತಿ ಯೋಜನೆ ಅನಾವಶ್ಯಕ ಎಂಬುದಾಗಿ ಹೇಳಿಕೆಗಳನ್ನು ನೀಡಿದ್ದು ಇದರ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆಯೇ ಹೊರತು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದಿಲ್ಲ. ಇದರ ಬಗ್ಗೆ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

ಕಳ್ಳರ ವಿರುದ್ಧ ಕ್ರಮ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಪೈಪುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ತನಿಖೆ ನಡೆಯಲಿ ಎಂದ ಸಚಿವ ಸುಧಾಕರ್, ಕಳ್ಳತನ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಹೊರಿಸಿದರೂ ಲಿಖಿತ ದೂರು ಸಲ್ಲಿಸುವಲ್ಲಿ ಜನರಲ್ಲಿ ನಿರ್ಲಕ್ಷ್ಯ ಕಂಡು ಬರುತ್ತಿದೆ. ಬಹುತೇಕರು ತಂಟೆಯೇ ಬೇಡ ಎಂಬ ಭಾವನೆಯಲ್ಲಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಆಯ್ಕೆಗೆ ಸಮಿತಿ ರಚನೆ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಮಿತಿಯನ್ನು ರಚಿಸಲಾಗುತ್ತಿದೆ. ಇದರೊಂದಿಗೆ ಅರ್ಹರನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡಲಾಗುವುದು. ಈಗ ಅನರ್ಹರು ಅರ್ಜಿ ಹಾಕಿಕೊಳ್ಳುತ್ತಿದ್ದಾರೆ. ಅರ್ಹರು ಸುಮ್ಮನಾಗುತ್ತಿದ್ದಾರೆ. ಇದರಿಂದ ಪ್ರಶಸ್ತಿ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕ್ರೀಡಾಂಗಣಕ್ಕೆ ಹಣ ಇಲ್ಲ

ರಾಜ್ಯ ಕ್ರೀಡಾ ಇಲಾಖೆಗೆ ಸರ್ಕಾರ 200 ಕೋಟಿ ರೂ ಅನುದಾನ ನೀಡಿದೆ. ಇದರ ನಡುವೆ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮಾತ್ರ 70 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದರೆ ಹಣ ಸಿಗುತ್ತದೆಯೇ? ಇದಕ್ಕೆ ಖಾಸಗಿ ಮತ್ತು ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚರ್ಚಿಸಲಾಗಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net