

ಗುತ್ತಲ: ಖಾಸಗಿ ಬೀಜ ಸಂಸ್ಕರಣ ಘಟಕದ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 28 ಲಕ್ಷ ರೂ. ಮೌಲ್ಯದ ಕಳಪೆ ಮೆಕ್ಕೆ ಜೋಳವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ಸಂಜೆ ಪಟ್ಟಣದ ನೆಗಳೂರ ರಸ್ತೆಯಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಜಾಗೃತ ಕೋಶದ ಉಪ ಕೃಷಿ ನಿರ್ದೇಶಕ ಬಸವರಾಜ ಡಿ.ಎಂ. ನೇತೃತ್ವದಲ್ಲಿ ದಾಳಿ ಮಾಡಿದ ಕೃಷಿ ಅಧಿಕಾರಿಗಳು, ಬೀಜೋಪಚಾರ ಮಾಡಿದ ಖುಲ್ಲಾ ಮೆಕ್ಕೆಜೋಳ, 89 ಚೀಲ ಮೆಕ್ಕೆಜೋಳ (ವಾಣಿಜ್ಯ) ಹಾಗೂ 196 ಚೀಲ ಪೋಟ್ಯಾಶ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ವಶಪಡಿಸಿಕೊಂಡರು. ಇವುಗಳ ಮೌಲ್ಯ 28 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ವೇಳೆ ಕಾವಲುಗಾರರಿಂದ ಅಕ್ರಮ ದಂಧೆಯ ಹಲವು ಆಯಾಮಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಘಟನೆಗೆ ಸಂಬಂಧಿಸಿದಂತೆ ಗುತ್ತಲ ಠಾಣೆಯಲ್ಲಿ ಖಾಸಗಿ ಬೀಜ ಸಂಸ್ಕರಣ ಘಟಕದ ವ್ಯವಸ್ಥಾಪಕ ಭಗತ್ರೆಡ್ಡಿ ಹಾಗೂ ಮೆಕ್ಕೆಜೋಳ ಬೀಜ ಸಂಗ್ರಹಿಸಿದ್ದರು ಎನ್ನಲಾದ ರಾಣೆಬೆನ್ನೂರಿನ ಸಮೀರ್ ಮುಜಾವರ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಜಂಟಿ ಕೃಷಿ ನಿರ್ದೇಶಕ ಡಿ. ಮಂಜುನಾಥ, ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಸಹಾಯಕ ಕೃಷಿ ನಿರ್ದೇಶಕ ಆರ್.ಕೆ. ಕುಡಪಲಿ, ಕೃಷಿ ಅಧಿಕಾರಿ ಕೊಟ್ರೇಶ, ಗುತ್ತಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ. ಪುಟ್ಟರಾಜ ಹಾವನೂರ, ಜಾಗೃತ ಕೋಶದ ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ, ಕೃಷಿ ಅಧಿಕಾರಿ ಮಹ್ಮದ ರಫೀಕ್, ಪಿಎಸ್ಐ ಶಂಕರಗೌಡ ಪಾಟೀಲ್ ಇದ್ದರು.