

ತೇರದಾಳ: ಶಿಕ್ಷಕರು ಪವಿತ್ರವಾದ ದೇಗುಲದಲ್ಲಿ ರಾಜಕಾರಣ ಮತ್ತು ಜಾತೀಯತೆ ಮಾಡಬಾರದು. ಅವರವರ ಕ್ಷೇತ್ರಗಳಲ್ಲಿ ಅವರದ್ದೆ ಆದಂತಹ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ದೇಶ ಕಟ್ಟುವ ಕಾರ್ಯ ಸುಗಮವಾಗುತ್ತದೆ.
ಸರ್ಕಾರಿ ಯೋಜನೆಗಳು ಬಲಾಢ್ಯರ ಸೊತ್ತಾಗುತ್ತಿವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಇದನ್ನೂ ಓದಿ: ಕೆಂಪು ಸುಂದರಿ ಮೇಲೆ ಕಳ್ಳರ ಕಣ್ಣು
ಸ್ಥಳೀಯ ಜೆವಿಎಂ ಗುರುಕುಲ ಸಭಾಭವನದಲ್ಲಿ ಶಿಕ್ಷಣ ಇಲಾಖೆ, ಜೆವಿಎಂ ಸಂಸ್ಥೆ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಧಕರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಲಿತಾಂಶದಲ್ಲಿ ಕನ್ನಡ ವಿಷಯದಲ್ಲಿ ಸಾಧನೆ ಅಗಾಧವಾಗಿದೆ. ಪಾಲಕರು ಸಾಲ ಮಾಡಿಯಾದರೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಬಡತನ ನಿರ್ಮೂಲನೆಗಾಗಿ ಶಿಕ್ಷಣ ಅಭಿವೃದ್ಧಿ ಸಾಧಿಸಬೇಕಿದೆ.
ದೇಶ ನೂರಕ್ಕೆ ನೂರರಷ್ಟು ಶಿಕ್ಷಣವಂತರಾದರೆ ಜಗತ್ತಿನ ಮಹಾನ್ ಶಕ್ತಿಯಾಗುವ ತಾಕತ್ತು ಭಾರತೀಯರಲ್ಲಿ ಮಾತ್ರ ಇದೆ. ಬೆವರು ಸುರಿಸಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದರು.
ರಬಕವಿಯ ಬ್ರಹ್ಮಾನಂದ ಮಠದ ಗುರುಸಿದ್ಧೇಶ್ವರ ಶ್ರೀ ಮಾತನಾಡಿ, ಶಿಕ್ಷಣ ಬದುಕನ್ನು ಬದಲಾಯಿಸುವ ಮಹಾನ್ ಶಕ್ತಿಯಾಗಿದೆ. ಮಕ್ಕಳನ್ನು ಹಾಗೂ ಶಿಕ್ಷಕರನ್ನು ಪ್ರೊತ್ಸಾಹಿಸುವ ಈ ಮಹಾಕಾರ್ಯದಿಂದ ಇಲ್ಲಿನ ಎಲ್ಲ ಮಕ್ಕಳು ಆಲದಮರದಂತೆ ಹೆಮ್ಮರವಾಗಿ ಬೆಳೆಯಲು ಸ್ಫೂರ್ತಿಯಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ, ಬಿಇಒ ಎ.ಕೆ. ಬಸನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಾಡು, ನುಡಿ, ಉಳಿಸಿ, ಬೆಳೆಸುವ ಕಾರ್ಯ ನಿರಂತರ ನಡೆಯುತ್ತಿದೆ.
ಇದನ್ನೂ ಓದಿ: ತತ್ವಕ್ಕಿಂತ ಆಚರಣೆ ಮುಖ್ಯ
ಜಮಖಂಡಿ ಅಖಂಡ ಶೈಕ್ಷಣಿಕ ತಾಲೂಕಿನಲ್ಲಿ 229 ವಿದ್ಯಾರ್ಥಿಗಳ ಪೈಕಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 121 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದುಕೊಂಡು ಸಾಧನೆ ಮಾಡಿದ್ದು, ಅವರಿಗೆ ‘ಕನ್ನಡ ಕಣ್ಮನಿ’ ಪ್ರಶಸ್ತಿ ಹಾಗೂ ತಾಲೂಕಿನ 65 ಶಾಲೆಗಳ ಪೈಕಿ 31 ಶಾಲೆಗಳ 34 ಕನ್ನಡ ಶಿಕ್ಷಕರ ಸಾಧನೆಗೆ ‘ಕನ್ನಡ ರತ್ನ ಪ್ರಶಸ್ತಿ’ ನೀಡಲಾಗುತ್ತಿದೆ ಎಂದರು.
ಬಿಆರ್‌ಸಿ ರಮೇಶ ಅವಟಿ, ಮುಖಂಡರಾದ ಪ್ರವೀಣ ನಾಡಗೌಡ, ಸುರೇಶ ಅಕ್ಕಿವಾಟ, ರಾಮಣ್ಣ ಹಿಡಕಲ್, ಮಹಾವೀರ ಕೊಕಟನೂರ, ಸಾಹಿತಿ ಡಾ.ಶಾರದಾ ಮುಳ್ಳೂರ, ಜೆವಿಎಂ ಸಂಸ್ಥೆಯ ಡಿ.ಆರ್. ಪಾಟೀಲ, ಡಾ.ಜೆ.ಬಿ. ಆಲಗೂರ, ಕೆ.ಪಿ. ಕುಳ್ಳಿ, ಪಿ.ಜಿ. ಹಟ್ಟಿ, ಶೈಕ್ಷಣಿಕ ಸಂಘಗಳ ಬಿ.ಎಸ್. ಕಡಕೋಳ, ಬಾಬಾಗೌಡ ಪಾಟೀಲ, ಆರ್.ಬಿ. ಬಾಬನ್ನವರ, ಕಸಾಪ ತಾಲೂಕು ಅಧ್ಯಕ್ಷ ಎಂ.ಕೆ. ಮೆಗಾಡಿ ಇತರರಿದ್ದರು.
ತಾಲೂಕಿನ ಶಾಲೆಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ 34 ಕನ್ನಡ ಭಾಷಾ ಶಿಕ್ಷಕರನ್ನು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯಿತು.