More

    ತತ್ವಕ್ಕಿಂತ ಆಚರಣೆ ಮುಖ್ಯ

    ಹೊರ್ತಿ: ಮಾನವ ಜೀವನ ಉತ್ಕೃಷ್ಟವಾದುದು. ಜನ್ಮ ಜನ್ಮಗಳ ಪುಣ್ಯಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಜಾತಿ, ಧರ್ಮಗಳ ಮಧ್ಯೆ ನಿರಂತರ ಸಂಘರ್ಷ ಉಂಟಾಗುತ್ತಿರುವುದು ಒಳ್ಳೆಯದಲ್ಲ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ ಮುಖ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಸಮೀಪದ ಕನ್ನೂರು ಗುರುಮಠದ ಲಿಂ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 18ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಆಧುನಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತಿದೆ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಧರ್ಮಪ್ರಜ್ಞೆ ಮತ್ತು ರಾಷ್ಟ್ರಪ್ರಜ್ಞೆಯ ಅರಿವಿನ ಕೊರತೆ ಕಾಣುತ್ತಿದ್ದೇವೆ ಎಂದರು.

    ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಶ್ರೇಯಸ್ಸಿಗೆ ಅಹಿಂಸಾದಿ ಧ್ಯಾನ ಪಯರ್ಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಸತ್ಯ ಶುದ್ಧವಾದ ಧರ್ಮ ಮಾರ್ಗದಲ್ಲಿ ನಡೆದು ಆರೋಗ್ಯಪೂರ್ಣ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.

    ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಮಾನವ ಜೀವನದಲ್ಲಿ ಒಂದು ಗುರಿ ಮತ್ತು ಗುರುವನ್ನು ಆಶ್ರಯಿಸಿ ಬಾಳಿದರೆ ಬದುಕು ಉಜ್ವಲಗೊಳ್ಳುವುದು. ಗುರು ಇಲ್ಲದ, ಗುರಿ ಇಲ್ಲದ ಜೀವನ ವ್ಯರ್ಥ, ಮಾನವ ಧರ್ಮಕ್ಕೆ ಜಯವಾಗಲೆಂಬ ವಿಶ್ವಬಂಧುತ್ವದ ಸಂದೇಶವನ್ನು ಪರಿಪಾಲಿಸಿ ಸಾಮರಸ್ಯ ಕಾಪಾಡಿಕೊಂಡು ಬರುವುದು ಎಲ್ಲರ ಜವಾಬ್ದಾರಿಯಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಧರ್ಮಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆ ಎಂದರು.

    ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಂತಿ, ನೆಮ್ಮದಿಯಿಲ್ಲದ ಬದುಕಿಗೆ ಒಂದಿಷ್ಟಾದರೂ ಆಧ್ಯಾತ್ಮದ ಅರಿವು ಅವಶ್ಯಕ. ಶಿವಜ್ಞಾನ ಮತ್ತು ಗುರು ಕಾರುಣ್ಯ ಜೀವನದ ಉನ್ನತಿಗೆ ಬಹುದೊಡ್ಡ ಶಕ್ತಿ, ವೀರಶೈವ ಧರ್ಮದಲ್ಲಿ ಆಚಾರ್ಯರು ಮತ್ತು ಶರಣರ ಅಮೂಲ್ಯ ಬೋಧಿಸಿದ್ದಾರೆ. ಅವುಗಳನ್ನು ಪರಿಪಾಲಿಸಿಕೊಂಡು ಮುನ್ನಡೆದರೆ ಜೀವನ ವಿಚಾರ ಧಾರೆಗಳನ್ನು ಸಾರ್ಥಕಗೊಳ್ಳುವುದೆಂದರು.

    11 ದಿನಗಳ ಕಾಲ ಇಳಕಲ್ಲ-ಗುಡೂರಿನ ಅನ್ನದಾನ ಶಾಸ್ತ್ರಿಗಳಿಂದ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರವಚನ ಜರುಗಿತು. ನಾಗಠಾಣ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಪದ್ಮಶ್ರೀ ಡಾ. ಮಂಜಮ್ಮ ಜೋಗತಿ ಅವರಿಗೆ ಸಮಾಜ ಸೇವಾ ಚಂದ್ರಿಕೆ ಹಾಗೂ ಹೊರ್ತಿಯ ಅಣ್ಣಪ್ಪ ಖೈನೂರು ಇವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

    ಮಸ್ಕಿ ಗುರುಶಾಂತ ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಗುಡ್ಡಾಪುರ ಗುರುಪಾದ ವರರುದ್ರಮುನಿ ಶಿವಾಚಾರ್ಯರು, ಚಿಮ್ಮಲಗಿ ಸಿದ್ಧರೇಣುಕ ಶಿವಾಚಾರ್ಯರು, ಬೊಮ್ಮನಹಳ್ಳಿ ಶಿವಾಚಾರ್ಯರು, ಶಿರಶ್ಯಾಡ ಮುರುೇಂದ್ರ ಶಿವಾಚಾರ್ಯರು, ಜಮಖಂಡಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಪುಣ್ಯ ಸ್ಮರಣೋತ್ಸವ ನಿಮಿತ್ಯ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿತು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಶ್ವಾರೂಢ ಸಾರೋಟ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts