ವ್ಹೀಲಿಂಗ್​ ಮಾಡಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

IMG-20240818-WA0057
Published on

ಚನ್ನಪಟ್ಟಣ

ಪುರಪೊಲೀಸ್ ಠಾಣೆಯ ಮುಂದೆಯೇ ಬೈಕ್ ವೀಲಿಂಗ್ ನಡೆಸಿ‌ ಪುಂಡಾಟ ಮೆರೆದಿದ್ದ ಪುಂಡರಿಗೆ ನಗರ ಪೊಲೀಸರು ಬಿಸಿಮುಟ್ಟಿಸಿದ್ದಾರೆ.

ಶನಿವಾರ ಬಿ.ಎಂ‌‌.ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್ ವಿಲೀಂಗ್ ನಡೆಸುವ ಮೂಲಕ ಪುಂಡಾಟ ಮೆರೆದಿದ್ದರು. ಅದರಲ್ಲೂ ಠಾಣೆ ಸಮೀಪವೇ ರಾಜಾರೋಷವಾಗಿ ವೀಲಿಂಗ್ ನಡೆಸುವ ಮೂಲಕ ದರ್ಪ ತೋರಿದ್ದರು. ಹೆದ್ದಾರಿಯಲ್ಲಿನ ಇವರ ಹುಚ್ಚಾಟ ಇತರ ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಈ ಪುಂಡರು ಬೈಕ್ ವೀಲಿಂಗ್ ನಡೆಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಬಿಸಿಮುಟ್ಟಿಸಿದ ಪೊಲೀಸರು!

ಹೆದ್ದಾರಿಯಲ್ಲಿ ಅದು ಠಾಣೆ ಸಮೀಪವೇ ವೀಲಿಂಗ್ ನಡೆಸಿ ಪುಂಡಾಟ ನಡೆಸಿದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಸಿಪಿಐ ರವಿಕಿರಣ್ ಮತ್ತು ತಂಡ ಪುಂಡರಿಗೆ ಬಿಸಿ ಮುಟ್ಟಿಸುವಲ್ಲಿ ಸಫಲಗೊಂಡಿದ್ದಾರೆ. ವಾಹನದ ನೋದಂಣಿ ಆಧರಿಸಿ ಬೈಕ್ ವೀಲಿಂಗ್ ನಡೆಸಿರುವ ಪುಂಡರನ್ನು ಪತ್ತೆ ಹಚ್ಚಲಾಗಿದೆ. ಬೈಕ್ ಸವಾರ ಜುನೈದ್ ಅಹಮದ್ ಹಾಗೂ ಹಿಂಬದಿ ಸವಾರ‌ ಅರ್ಹಂ ಬೇಗ್ ಎಂಬುವನನ್ನು ಗುರುತಿಸಲಾಗಿದೆ. ಈ ಕುರಿತು ಈ ಇಬ್ಬರ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಇಬ್ಬರು ಶೇರ್ವಾ ಸರ್ಕಲ್ ಬಳಿಯ‌ ನಿವಾಸಿಗಳು ಎನ್ನಲಾಗಿದ್ದು, ಒರ್ವನನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ, ವಾಹನ ಮಾಲೀಕರ ಮೇಲೂ ಪ್ರಕರಣ ದಾಖಲಿಸಲು ಸಿದ್ದತೆ ಮಾಡುತ್ತಿದ್ದಾರೆ.

ಪುಂಡಾಟಿಕೆ ನಡೆಸಿದವರನ್ನು ಶೀಘ್ರವಾಗಿ ಪತ್ತೆ ಹಚ್ಚಿರುವ ಪೊಲೀಸರ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಇದೇ ರೀತಿಯಾಗಿ ಪುಂಡಾಟ ನಡೆಸುವವರು ಬೆಚ್ಚಿ ಬೀಳುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ಪುಂಡಾಟ ಜೋರು!

ಬೆಂಗಳೂರು ಮೈಸೂರು ಹಳೆ ಹೆದ್ದಾರಿ ಸೇರಿದಂತೆ ನೂತನ ಎಕ್ಸ್ಪ್ರೆಸ್ ಹೈವೇಯ ಸರ್ವೀಸ್ ರಸ್ತೆಯಲ್ಲಿ ಬೈಕ್ ವೀಲಿಂಗ್ ನಡೆಸುವವರ ಪುಂಡರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ವೀಲಿಂಗ್ ಮಾಡುವ ವಿಡಿಯೋ ಶೂಟಿಂಗ್ ಗಾಗಿ ಪುಂಡರು ಬೈಪಾಸ್ ರಸ್ತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹೆದ್ದಾರಿಯಲ್ಲಿ ವೀಲಿಂಗ್ ಮಾಡುವ ಜೊತೆಗೆ, ಇತರೆ ವಾಹನ ಸವಾರರಿಗೆ ಚಮಕ್ ಕೊಟ್ಟು ಮಜಾ ತೆಗೆದುಕೊಳ್ಳುವ ಪುಂಡರ ವಿರುದ್ಧ ಪೊಲೀಸ್ ಇಲಾಖೆ ಕಠಿಣಕ್ರಮ ಕೈಗೊಳ್ಳಲಿ  ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕೋಟ್-೧

ಶನಿವಾರ ಪುರ ಠಾಣೆ ಸಮೀಪ ಬೈಕ್ ವೀಲಿಂಗ್ ನಡೆಸಿದ ಇಬ್ಬರನ್ನು ಪತ್ತೆ ಹಚ್ಚಿದ್ದೇವೆ‌. ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ಬೈಕ್ ವೀಲಿಂಗ್ ನಡೆಸುವರನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಸಹಕರಿಸಬೇಕು. ವೀಲಿಂಗ್ ಮಾಡುವ ವಾಹನದ ನೋದಂಣಿ ಸಂಖ್ಯೆ ಹಾಗೂ ಅವರ ಭಾವಚಿತ್ರವನ್ನು ಇಲಾಖೆಗೆ ತಲುಪಿಸುವ ಕೆಲಸ ಮಾಡಬೇಕು. ಆಗ ಅಂಥವರಿಗೆ ಬಿಸಿ ಮುಟ್ಟಿಸಲು ಸಾಧ್ಯವಾಗುತ್ತದೆ.

- ರವಿಕಿರಣ್, ನಗರ ಸಿಪಿಐ ಚನ್ನಪಟ್ಟಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net