

ದಾವಣಗೆರೆ: ಅನಾಥ ಶವ ಎಂದು ಪರಿಗಣಿಸಿ ಪೊಲೀಸರು ಅಂತ್ಯಸಂಸ್ಕಾರ ಮಾಡಿಸಿದ್ದ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಮಾತ್ರವಲ್ಲ, ಹೂತು ಹಾಕಿದ 20 ದಿನಗಳ ಬಳಿಕ ಶವವನ್ನು ಹೊರಕ್ಕೆ ತೆಗೆಸಿರುವ ಪೊಲೀಸರು ಮತ್ತೊಂದು ಸುತ್ತಿನ ತನಿಖೆಗೆ ಮುಂದಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬುಳ್ಳಾಪುರ ಗ್ರಾಮದ ನಿವಾಸಿ ತಿಪ್ಪೇಶಪ್ಪ (30) ಮೃತಪಟ್ಟವರು. ಮೇ 9ರಂದು ಬುಳ್ಳಾಪುರದ ತುಂಗಾಭದ್ರಾ ನದಿ ತೀರದಲ್ಲಿ ಇವರ ಶವ ಪತ್ತೆಯಾಗಿತ್ತು. ಆದರೆ ಈ ಶವಕ್ಕೆ ವಾರಸುದಾರರು ಪತ್ತೆಯಾಗದ್ದರಿಂದ ಅನಾಥ ಶವ ಎಂದು ಪರಿಗಣಿಸಿ ಪೊಲೀಸರು ಶವಸಂಸ್ಕಾರ ನಡೆಸಿದ್ದರು.
ಆದರೆ ಮೇ. 31ರಂದು ತಿಪ್ಪೇಶಪ್ಪನ ತಂದೆ ಶಿವಮೂರ್ತಪ್ಪ ಅವರಿಂದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ತನಿಖೆಗಿಳಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ನಾಗರಾಜ್, ಪ್ರವೀಣ, ರಾಜ, ಮಂಜುನಾಥ, ಸಾಸ್ವೆಹಳ್ಳಿಯ ನಾಗರಾಜ ಬಂಧಿತರು.
ಹೆಚ್ಚಿನ ತನಿಖೆ ಸಲುವಾಗಿ ಶವಸಂಸ್ಕಾರ ನಡೆಸಿದ 20 ದಿನಗಳ ಬಳಿಕ ಅಂದರೆ ಇವತ್ತು ಅದನ್ನು ಹೊರಕ್ಕೆ ತೆಗೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ತಹಸೀಲ್ದಾರ್ ಬಸನಗೌಡ ಕೊಟ್ಟೂರು, ಸಿಪಿಐ ದೇವರಾಜ್, ಪಿಎಸ್ಐ ಬಸವನಗೌಡ ಬಿರಾದಾರ್, ವೈದ್ಯ ಡಾ.ಎಚ್.ಜೆ. ನರೇಂದ್ರ, ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶಕಿ ಭಾರ್ಗವಿ ಅವರ ಸಮ್ಮುಖ ಶವ ಹೊರತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.