ಅಬ್ಬರಿಸಿದ ಮಳೆಗೆ ತತ್ತರಿಸಿದ ಜನ

2
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರಿನಲ್ಲಿ ಸಿಲುಕಿದ ಕಾರುಗಳು.
Published on

ಜಕ್ಕಲಮಡಗು ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳ ಕೋಡಿ ಹರಿದ ಶ್ರೀನಿವಾಸ ಸಾಗರ

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ವರುಣರಾಯ ಆರ್ಭಟಿಸುತ್ತಿದ್ದು, ವಾಡಿಕೆಗಿಂತ ಹೆಚ್ಚಿಗೆ ಸುರಿದ ಧಾರಾಕಾರ ಮಯು ಅಲ್ಲಲ್ಲಿ ಅವಾಂತರ ಸೃಷ್ಟಿಸಿದೆ.

ಮುಂಗಾರಿನಲ್ಲಿ ಮಳೆ ಅಭಾವ ಎದುರಿಸಿದ್ದ ಈ ಭಾಗದಲ್ಲಿ ಕಳೆದ ಒಂದು ವಾರದಿಂದಲೂ ಮೋಡ ಮುಸುಕಿದ ವಾತಾವರಣವಿದ್ದು, ಸಾಧಾರಣ ಮಳೆ ಬಿದ್ದಿತ್ತು. ಆದರೆ, ಸೋಮವಾರ ತಡರಾತ್ರಿಯಿಂದ ಮಳೆ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಯಿತು.

ಮುಳುಗಿದ ಕಾರುಗಳು

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಮತ್ತು ಸರ್ವೀಸ್ ರಸ್ತೆ ಜಲಾವೃತಗೊಂಡು ಎರಡು ಕಾರುಗಳು ಮುಳುಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳೆಯ ನೀರು ಹೆದ್ದಾರಿ ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿದಿದ್ದು, ಇದೇ ವೇಳೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು, ನೀರಿನ ರಭಸದಲ್ಲಿ ಕೊಚ್ಚಿ ಹೋಗಿವೆ. ತಕ್ಷಣ ವಾಹನದಲ್ಲಿದ್ದವರು ಹೊರಬಂದಿದ್ದು, ಸ್ಥಳೀಯರು ಸಹ ಸಮಯಪ್ರಜ್ಞೆ ತೋರಿ, ರಕ್ಷಿಸಿದ್ದಾರೆ. ಇನ್ನು ವಾಹನಗಳು ಸಂಪೂರ್ಣ ಮುಳುಗಡೆಯಾಗಿವೆ. ಮಂಗಳವಾರ ಬೆಳಗ್ಗೆ ಕ್ರೇನ್ ಬಳಸಿ ವಾಹನಗಳನ್ನು ಮೇಲಕ್ಕೆ ಎತ್ತಲಾಯಿತು. ಇದೇ ವೇಳೆ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸಿರುವುದರಿಂದ ಅವಘಡಗಳು ಮತ್ತು ತೋಟಗಳಿಗೆ ಆಗಾಗ ನೀರು ನುಗ್ಗಿ ನಷ್ಟ ಸಂಭವಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಒತ್ತುವರಿಯಿಂದ ಸಮಸ್ಯೆ

ಚಿಕ್ಕಬಳ್ಳಾಪುರ ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿಯಿಂದ ಮಳೆಯ ನೀರು ಅಕ್ಕಪಕ್ಕದ ದೇಗುಲ ಮತ್ತು ತೋಟಗಳಿಗೆ ನುಗ್ಗಿದೆ. 2 ಅಡಿಗಿಂತಲೂ ಎತ್ತರಕ್ಕೆ ನೀರು ನಿಂತು ಗ್ರಾಮ ದೇವತೆಗೆ ಜಲದಿಗ್ಬಂಧನ ಹಾಕಿದಂತಿತ್ತು. ಸ್ಥಳೀಯರು ದೇಗುಲಕ್ಕೆ ತೆರಳಲು ತೊಂದರೆ ಅನುಭವಿಸಬೇಕಾಯಿತು. ಇಲ್ಲಿನ ರಾಜಕಾಲುವೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯದೇ ತೋಟ, ಮನೆ ಮತ್ತು ದೇಗುಲಗಳಿಗೆ ನುಗ್ಗುತ್ತಿದೆ. ಈಗಲಾದರೂ ಒತ್ತುವರಿ ತೆರವಿಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು

ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 4.6 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ 37.5 ಮಿ.ಮೀ. ಮಳೆ ಸುರಿದಿದೆ. ಹಾಗೆಯೇ ಕಳೆದ ಒಂದು ವಾರದಲ್ಲಿ (ಅ.16ರಿಂದ ಅ.22 ರವರೆಗೆ) 25.5 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ 96.7 ಮಿ.ಮೀ. ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ವಾಡಿಕೆ ಮಳೆ (ಇದುವರೆಗೆ) 109.4 ಮಿ.ಮೀ.ಗೆ ಬದಲಾಗಿ 189.9 ಮಿ.ಮೀ. ಮಳೆಯಾಗಿದೆ.

ಜಕ್ಕಲಮಡವಿಗೆ ಹರಿದ ನೀರು

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಮೂಲವಾದ ಜಕ್ಕಲಮಡು ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಜಲಾಶಯದ ಸುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಎಚ್.ಎನ್.ವ್ಯಾಲಿಯ ಸಂಸ್ಕರಿತ ನೀರು ಪೂರೈಕೆಯ ಜತೆಗೆ ಮಳೆಯಿಂದಾಗಿ ಶ್ರೀನಿವಾಸ ಸಾಗರ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ಕಟ್ಟಡ ಆವರಿಸಿಕೊಂಡ ನೀರು

ಧಾರಾಕಾರ ಮಳೆಗೆ ಕಟ್ಟಡಗಳು ಮತ್ತು ದೇಗುಲಗಳು ಸೇರಿ ಹಲವು ಪ್ರದೇಶಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು. ನಗರದ ತಾಲೂಕು ಪಂಚಾಯಿತಿ ಸಭಾಂಗಣ, ಕಚೇರಿ ಆವರಣ, ವೇಣುಗೋಪಾಲಸ್ವಾಮಿ ರಸ್ತೆ ಮತ್ತು ದರ್ಗಾ ಮೊಹಲ್ಲಾ ರಸ್ತೆಗಳಲ್ಲಿ ಕೆರೆಯಂತೆ ನೀರು ಸಂಗ್ರಹಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net