ಪ್ರಗತಿಯ ವೇಗ ಮತ್ತಷ್ಟು ಹೆಚ್ಚಬೇಕಿದೆ

web 2
Published on

ಜಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ 18 ವರ್ಷ ಕಳೆದರೂ ಕೆಲವು ಸೇವೆಗಳಿಗೆ ಈಗಲೂ ಕೋಲಾರಕ್ಕೆ ಹೋಗಬೇಕಾಗಿದೆ

ಚಿಕ್ಕಬಳ್ಳಾಪುರ: ಪ್ರತ್ಯೇಕ ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 18 ವರ್ಷ ಕಳೆದಿರುವುದರ ನಡುವೆ ಈ ಭಾಗದ ಪ್ರಗತಿ, ನಿರೀಕ್ಷೆಯ ಅಭಿವೃದ್ಧಿ ಕೆಲಸಗಳು ಚರ್ಚೆಗೆ ಗ್ರಾಸವಾಗಿದ್ದು ಮತ್ತಷ್ಟು ಸಾಧನೆಯ ಅಗತ್ಯದ ಮಾತುಗಳು ಕೇಳಿ ಬರುತ್ತಿವೆ.
ಅವಿಭಜಿತ ಕೋಲಾರ ಜಿಲ್ಲೆಯಿಂದ ಪ್ರತ್ಯೇಕಗೊಂಡು 2007ನೇ ಆ.23ರಂದು ಹೊಸ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಉದಯಿಸಿತು. ಪ್ರತ್ಯೇಕ ಆಡಳಿತ ಯಂತ್ರ ರಚನೆಯಾಗಿದ್ದು ಇದರ ನಡುವೆ ಪ್ರಗತಿಯು ಮತ್ತಷ್ಟು ವೇಗದ ಗತಿಯಲ್ಲಿ ಸಾಗಬೇಕಾಗಿದೆ. ಇಲ್ಲಿ ಜಿಲ್ಲಾಡಳಿತ ಭವನ, ಜಿಪಂ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೇರಿ ಪ್ರಮುಖ ಕಚೇರಿಗಳು ಸ್ಥಾಪನೆಯಾಗಿವೆ. ಇದರ ನಡುವೆಯೂ ಬೆಂಗಳೂರು ವಿಶ್ವವಿದ್ಯಾಲಯ, ಬೆಸ್ಕಾಂ ಗ್ರಾಹಕ ಕೇಂದ್ರ, ನೆಹರೂ ಯುವ ಕೇಂದ್ರ, ಕೋಚಿಮುಲ್, ಡಿಸಿಸಿ ಬ್ಯಾಂಕ್, ಬಿಎಸ್‌ಎನ್‌ಎಲ್ ಸೇರಿ ಇತರ ಕಚೇರಿ ಸೇವೆಗಳಿಗೆ ಈಗಲೂ ಕೋಲಾರದ ಕೇಂದ್ರ ಕಚೇರಿಯನ್ನೇ ಅವಲಂಬಿಸಬೇಕಿದೆ.


ಅಭಿವೃದ್ಧಿಯ ಗರಿ
ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಸರ್ಕಾರಿ ಮೆಡಿಕಲ್ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮುದ್ದೇನಹಳ್ಳಿ, ಚಿಂತಾಮಣಿಯಲ್ಲಿ ತಲಾ ಒಂದೊಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ನಡೆಯುತ್ತಿವೆ. ಈ ಭಾಗದ ಅಂತರ್ಜಲಮಟ್ಟ ವೃದ್ಧಿಗಾಗಿ ಬೆಂಗಳೂರು ನಗರದ ಹೆಬ್ಬಾಳ ಮತ್ತು ನಾಗವಾರ ವ್ಯಾಲಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಟಕದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗಿದೆ. ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್ ನಿಲ್ದಾಣ ಸ್ಥಾಪನೆ ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಬೆವಿಕಂ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗಾಗಿ 10 ದ್ವಿಚಕ್ರ ವಾಹನಗಳ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ಲಾಸ್ಟಿಕ್‌ಮುಕ್ತ ಚಿಕ್ಕಬಳ್ಳಾಪುರ ಅಭಿಯಾನವನ್ನು ಕೈಗೊಳ್ಳುತ್ತಿದ್ದು ಸುಂದರ ನೈರ್ಮಲ್ಯ ಜಿಲ್ಲೆಯನ್ನಾಗಿಸಲು ಶ್ರಮಿಸಲಾಗುತ್ತಿದೆ.


ಕೈಗಾರಿಕಾಭಿವೃದ್ಧಿ ಆಮೆಗತಿ
ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಕೈಗಾರಿಕಾ ವಲಯ ನಿರ್ವಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ವೇಗವಾಗಿ ನಡೆಯುತ್ತಿದೆ. ಆದರೆ, ಉದ್ದಿಮೆಗಳ ಸ್ಥಾಪನೆಯಲ್ಲಿ ವರ್ಷಾನುಗಟ್ಟಲೇ ವಿಳಂಬವಾಗುತ್ತಿದೆ. ಪ್ರಸ್ತುತ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮವು ಗೌರಿಬಿದನೂರು ತಾಲೂಕಿನಲ್ಲಿ 474.18 ಎಕರೆ, ಚಿಂತಾಮಣಿ ತಾಲೂಕಿನಲ್ಲಿ 564.14 ಎಕರೆ ಮತ್ತು ಶಿಡ್ಲಟ್ಟ ತಾಲೂಕಿನಲ್ಲಿ 2823.04 ಎಕರೆ ಸೇರಿ 3861.36 ಎಕರೆ ವಿಸ್ತೀರ್ಣದ ಜಮೀನು ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಬಾಗೇಪಲ್ಲಿ ತಾಲೂಕಿನಲ್ಲಿ ಈ ಹಿಂದೆ ಪ್ರಾಥಮಿಕ ಅಧಿಸೂಚನೆಯಾಗಿದ್ದ 809.31 ಎಕರೆ ವಿಸ್ತೀರ್ಣದ ಜಮೀನನ್ನು ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ 4671.27 ಎಕರೆಗಳ ವಿಸ್ತೀರ್ಣದಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಕೈಗಾರಿಕಾ ಪ್ರದೇಶ ಅಭಿವದ್ಧಿಗೆ ಗುರಿ ಹೊಂದಲಾಗಿದೆ.


ರೋಪ್‌ವೇ ಕಾಮಗಾರಿ ಬಾಕಿ
ನಂದಿ ಪ್ರಾಧಿಕಾರದ ರಚನೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಜನರ ಕನಸು ನನಸಾಗಿಲ್ಲ. ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ವಾಣದ ಯೋಜನೆಯನ್ನು ಕೈಗೊಂಡಿದ್ದು ಈಗಾಗಲೇ ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಭೂಸ್ವಾಧೀನ, ತಾಂತ್ರಿಕ, ಸ್ಥಳೀಯ ವಿರೋಧದ ಸಮಸ್ಯೆಗಳು ಬಾಧಿಸುತ್ತಿದ್ದು ಭೂಮಿಪೂಜೆಗಷ್ಟೇ ಸೀಮಿತವಾಗಿದೆ.


ನೀರಾವರಿ ಆತಂಕ ದೂರವಾಗಿಲ್ಲ
ತ್ಯಾಜ್ಯ ಸಂಸ್ಕರಿಸಿದ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸಲು ಒತ್ತಾಯ ಕೇಳಿ ಬರುತ್ತಿದೆ. ಆದರೆ, ಇದರಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟದ ನಡುವೆ ಮಾರಕ ಅಂಶಗಳನ್ನು ಹೊಂದಿರುವ ನೀರಿನಿಂದ ಅಂತರ್ಜಲ ಕಲುಷಿತ, ಕುಡಿಯುವ ನೀರಿನ ಗುಣಮಟ್ಟ ಕುಸಿತ ಸೇರಿ ನಾನಾ ಸಮಸ್ಯೆಗಳನ್ನು ಜನರು ಅನುಭವಿಸುವಂತಾಗಿದೆ. ಎತ್ತಿನಹೊಳೆ ಜತೆಗೆ ವಿವಿಧ ಬೃಹತ್ ನೀರಾವರಿ ಯೋಜನೆಗಳು ಚುನಾವಣಾ ಪ್ರಚಾರಕ್ಕೆ ಸೀಮಿತವಾಗಿವೆ.


ಪ್ರತ್ಯೇಕತೆಯ ಕೂಗು ವಿಳಂಬ
ರಾಜಕೀಯ ಗಲಾಟೆಯಲ್ಲಿ ಪ್ರತ್ಯೇಕ ಚಿಮುಲ್ ರಚನೆಯು ನಲುಗಿದೆ. ಹಾಲು ಒಕ್ಕೂಟದಲ್ಲಿ ಪರ ಮತ್ತು ವಿರೋಧವು ಹೈನುಗಾರಿಕೆಯ ಅಭಿವೃದ್ಧಿಗೆ ತೊಡಕಾಗಿದೆ. ಇನ್ನು ಜಿಲ್ಲಾ ಸಹಕಾರ ಬ್ಯಾಂಕ್ ರಚನೆಯೂ ಭರವಸೆಯಾಗಿಯೇ ಉಳಿದಿದೆ.


ೋಷಣೆಯ ಕೆಲಸಗಳು
ಚಿಕ್ಕಬಳ್ಳಾಪುರದಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳು, ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆ ಸ್ಥಾಪನೆ, ಹೈಟೆಕ್ ಜಿಲ್ಲಾ ಕ್ರೀಡಾಂಗಣ ಸೇರಿ ಹಲವು ಕೆಲಸಗಳು ೋಷಣೆಗೆ ಸೀಮಿತವಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಪ್ರಾಮಾಣಿಕ ಮತ್ತು ಪಕ್ಷಾತೀತವಾಗಿ ಶ್ರಮಿಸಬೇಕು. ಇದರಲ್ಲಿ ರಾಜಕೀಯ ಬಿಟ್ಟು, ಸ್ಥಳೀಯರ ಹಿತವನ್ನು ಕಾಪಾಡಬೇಕು. ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.ವಿ.ರವಿಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net