

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಯ ಕಟ್ಟಡಗಳನ್ನು ಸದ್ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ಮೊದಲಿನಿಂದಲೂ ವಿಫಲರಾಗಿದ್ದು, ಒಂದೆಡೆ ಆದಾಯಕ್ಕೆ ಖೋತಾ ಬೀಳುತ್ತಿದ್ದರೆ ಮತ್ತೊಂದೆಡೆ ಜಾಗ ಪಾಳು ಬಿದ್ದು ಹಾಳಾಗುತ್ತಿದೆ. ಆದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೈಟೆಕ್ ಸೌಕರ್ಯಗಳೊಂದಿಗೆ ನಿರ್ಮಿಸಿಕೊಂಡಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಸಮೀಪದಲ್ಲಿಯೇ ಸಿಟಿಜನ್ ಕ್ಲಬ್, ತಾಪಂ ಕಚೇರಿ ಆವರಣದಲ್ಲಿರುವ ಹಳೇ ಉಪ ವಿಭಾಗಾಧಿಕಾರಿ ಕಟ್ಟಡವು ವರ್ಷಾನುಗಟ್ಟಲೇ ಖಾಲಿ ಬಿದ್ದಿವೆ. ಕಿಟಕಿ ಮತ್ತು ಬಾಗಿಲನ್ನು ಮುಚ್ಚಿರುವುದರಿಂದ ಧೂಳು ತುಂಬಿಕೊಂಡಿದ್ದು, ಅನೈತಿಕ ಚಟುವಟಿಕೆ ಮತ್ತು ಮಲಮೂತ್ರ ವಿಸರ್ಜನೆಯ ಸ್ಥಳಗಳಾಗಿ ಪರಿವರ್ತನೆಯಾಗಿವೆ. ಇವುಗಳಿಗೆ ಹೊಸ ಸ್ವರೂಪ ನೀಡಿ, ಸದ್ಬಳಸಿಕೊಳ್ಳುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ.
ಐತಿಹಾಸಿಕ ಕಟ್ಟಡವೂ ಹಾಳು
ಕೋಲಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 2007ನೇ ಸಾಲಿನಲ್ಲಿ ಪ್ರತ್ಯೇಕಗೊಳ್ಳುವ ಮೊದಲು ಇಂದಿನ ಹಳೇ ಎ.ಸಿ. ಕಚೇರಿ ಉಪ ವಿಭಾಗದ ಆಡಳಿತದ ಶಕ್ತಿ ಕೇಂದ್ರವಾಗಿತ್ತು. ಉಪ ವಿಭಾಗಾಧಿಕಾರಿಗಳ ಕಚೇರಿಯು ತಾಲೂಕು ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಬಳಿಕ ಕಟ್ಟಡವನ್ನು ಕೆಲ ತಿಂಗಳ ಕಾಲ ಹೆಚ್ಚುವರಿ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಕಲಾಪಗಳನ್ನು ನಡೆಸಲು ನ್ಯಾಯಾಲಯ ಬಾಡಿಗೆಗೆ ಪಡೆದಿತ್ತು. ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಹಳೇ ಎಸಿ ಕಚೇರಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದು, ಕಳೆದ ಆರೇಳು ವರ್ಷಗಳಿಂದಲೂ ಕಟ್ಟಡ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಕಟ್ಟಡವು ಅನೇಕ ಆಡಳಿತಾತ್ಮಕ ನಿರ್ಣಯಗಳಿಗೆ ಸಾಕ್ಷಿಯಾಗಿದೆ. ಆದರೆ, ಇಂತಹ ಕಟ್ಟಡ ಹಾಳಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿರುಕುಬಿಟ್ಟ ಗೋಡೆಗಳು
ಹಳೇ ಎಸಿ ಕಚೇರಿ ಕಟ್ಟಡ ಬಳಕೆಯಿಲ್ಲದೆ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಕಟ್ಟಡ ಕಿಟಕಿ ಬಾಗಿಲುಗಳಿಗೆ ಬಳಸಿದಂತಹ ಕಬ್ಬಿಣವು ಕಳ್ಳರ ಪಾಲಾಗಿದೆ. ಇನ್ನು ತಾಪಂ ಹಾಗೂ ಕೃಷಿ ಇಲಾಖೆ ಕಚೇರಿ, ಪತ್ರಕರ್ತರ ಭವನಕ್ಕೆ ಆಗಮಿಸುವಂತಹ ಸಾರ್ವಜನಿಕರ ಮೂತ್ರ ವಿಸರ್ಜನೆಯಿಂದ ಕಟ್ಟಡದ ಸೌಂದರ್ಯ ಮತ್ತಷ್ಟು ಹಾಳಾಗುತ್ತಿದೆ. ಈ ಕಟ್ಟಡವನ್ನು ಚಿತ್ರಕಲಾ ಶಿಕ್ಷಕರ ಆರ್ಟ್ ಗ್ಯಾಲರಿಗೆ ಮೀಸಲಿಡುವ ನಿಟ್ಟಿನಲ್ಲಿ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಬಯಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಇತರರ ಅಪಸ್ವರದಿಂದ ಯೋಜನೆ ಎಲ್ಲವೂ ತಲೆ ಕೆಳಗಾಯಿತು. ಇತ್ತ ಉಣ್ಣಲಿಲ್ಲ, ಬೇರೆಯವರಿಗೆ ಉಣ್ಣಲು ಬಿಡಲಿಲ್ಲ ಎನ್ನುವಂತಾಗಿದ್ದು, ತಿಂಗಳಾನುಗಟ್ಟಲೇ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಒಳಗಡೆ ಇಲಿ, ಹೆಗ್ಗಣ, ಜೇಡರ ಬಲೆ, ತುಂಬಿಕೊಂಡಿರುವ ಧೂಳಿನಿಂದ ಎಸಿ ಕಚೇರಿ ಕಟ್ಟಡ ಹಾಳಾಗಿದೆ. ಇದರ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಅನಾಥವಾದ ಸಿಟಿಜನ್ ಕ್ಲಬ್ ಕಟ್ಟಡ
ಒಂದು ಕಾಲದಲ್ಲಿ ಸಂಘ-ಸಂಸ್ಥೆಗಳ ಕ್ರಿಯಾಶೀಲ ಕಾರ್ಯಕ್ರಮಗಳು ಮತ್ತು ಕ್ರೀಡಾ ಚಟುವಟಿಕೆ, ಬಳಿಕ ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಸಿಟಿಜನ್ ಕ್ಲಬ್ ಈಗ ಅನಾಥ ಕಟ್ಟಡವಾಗಿದೆ. ಮುರಿದು ಬಿದ್ದ ಕುರ್ಚಿಗಳು, ಧೂಳು ಹಿಡಿದ ಟೇಬಲ್‌ಗಳು, ಕಸದ ತೊಟ್ಟಿಯ ವಾತಾವರಣವು ಇಲ್ಲಿ ಕಂಡು ಬರುತ್ತಿದೆ. ಸಮೀಪದಲ್ಲಿಯೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸ, ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಇವೆ. ಈ ಭಾಗದಲ್ಲಿ ಬಾಡಿಗೆ ದರ ದುಬಾರಿಯಾಗಿದೆ. ಇದರ ಅರಿವಿದ್ದರೂ ಕಟ್ಟಡವನ್ನು ಮರೆತು ಹೋದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. 1996ರಲ್ಲಿ ಸ್ಥಾಪನೆಯಾದ ಸಿಟಿಜನ್ ಕ್ಲಬ್ ಇಲ್ಲಿ ಖುಷಿ ಚಟುವಟಿಕೆಯ ತಾಣವಾಗಿತ್ತು. ಇದರ ನಡುವೆ ಖಾಲಿ ಇದ್ದ ಸಂದರ್ಭದಲ್ಲಿ ಜಿಲ್ಲಾಡಳಿತವು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ವಹಣೆಗೆ ಅವಕಾಶ ನೀಡಿದ್ದು, ತಾತ್ಕಾಲಿಕ ತರಗತಿಗಳು ನಡೆಯುತ್ತಿದ್ದವು. ಇಲ್ಲಿನ ಮೂಲ ಸೌಕರ್ಯಗಳ ಕೊರತೆ, ಹೊಸ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಕಾಲೇಜು ಸ್ಥಳಾಂತರಗೊಂಡಿದೆ. ಇನ್ನೂ ಸಿಟಿಜನ್ ಕ್ಲಬ್‌ನ ಅಧ್ಯಕ್ಷರು ಉಪ ವಿಭಾಗಾಧಿಕಾರಿಗಳು. ಯಾವುದೇ ಅಧಿಕಾರಿಗಳು ಇತ್ತ ಮುಖ ತೋರದಿರುವುದು ಅಸಡ್ಡೆ ಧೋರಣೆಗೆ ನಿದರ್ಶನವಾಗಿದೆ.
ಚಿಕ್ಕಬಳ್ಳಾಪುರದ ಹಳೇ ಉಪ ವಿಭಾಗಾಧಿಕಾರಿಗಳ ಕಚೇರಿ, ಸಿಟಿಜನ್ ಕ್ಲಬ್ ಸೇರಿದಂತೆ ಸರ್ಕಾರಿ ನಾನಾ ಕಟ್ಟಡಗಳು ಪಾಳು ಬಿದ್ದಿವೆ. ಇವುಗಳ ಸದ್ಬಳಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೊಸದಾಗಿ ಕಟ್ಟಡವನ್ನು ನಿರ್ಮಿಸಿ, ಸರ್ಕಾರಿ ಕಚೇರಿಗಳನ್ನು ನಿರ್ವಹಿಸಿದ್ದಲ್ಲಿ ಆದಾಯವಾದರೂ ಬರುತ್ತದೆ.
-ನರಸಿಂಹಮೂರ್ತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿ, ಚಿಕ್ಕಬಳ್ಳಾಪುರ
ಹಿಂದೆ ಚಿಕ್ಕಬಳ್ಳಾಪುರದ ಹಳೇ ಉಪ ವಿಭಾಗಾಧಿಕಾರಿಗಳ ಕಟ್ಟಡವನ್ನು ಚಿತ್ರಕಲಾ ಶಿಕ್ಷಕರ ಆರ್ಟ್ ಗ್ಯಾಲರಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಾಗಿದ್ದ ಪಿ.ಅನಿರುದ್ಧ್ ಶ್ರವಣ್ ಕ್ರಮ ಕೈಗೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಿವಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳ ನೆಪದಲ್ಲಿ ಕೆಲವರು ಅಪಸ್ವರ ತೆಗೆದರು. ಈಗ ಜಾಗ ನಿರರ್ಥಕವಾಗಿಯೇ ಉಳಿದಿದೆ. ಅಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣದ ಚರ್ಚೆಯಲ್ಲಿಯೇ ಕಾಲಹರಣವಾಗುತ್ತಿದೆ.
-ಹೆಸರು ಹೇಳಲು ಇಚ್ಛಿಸದ ಚಿತ್ರಕಲಾ ಶಿಕ್ಷಕ, ಚಿಕ್ಕಬಳ್ಳಾಪುರ