

ಪುತ್ತೂರು ಗ್ರಾಮಾಂತರ: ಅಡಕೆ ಜತೆಗೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತೇವೆ. ಆದರೆ ಆಹಾರ ಬೆಳೆಗಳನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಕಾನ ಹೇಳಿದರು.
ಬಡಗನ್ನೂರು ಗ್ರಾಮದ ಪಟ್ಟೆಯ ಪ್ರತಿಭಾ ಪ್ರೌಢಶಾಲೆಯಲ್ಲಿ, ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಸುಳ್ಯ ಪದವು ವಿಜಯ ಗ್ರಾಮೀಣ ಸಮಿತಿ ಮತ್ತು ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ‘ಭತ್ತದ ಕೃಷಿಯ ವಿಶೇಷ ಅಭಿಯಾನ’ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ್ ಭಟ್ ಮಾತನಾಡಿ, ಭತ್ತದ ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅವರನ್ನು ಪ್ರೇರೇಪಿಸುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ಸುಳ್ಯಪದವು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಗೋವಿಂದ ಭಟ್ ಪಿ. ಅವರು ಮಾತನಾಡಿದರು. ಪಟ್ಟೆ ವಿದ್ಯಾಸಂಸ್ಥೆಯ ಸಂಚಾಲಕ ನಾರಾಯಣ ಭಟ್, ನಿವೃತ್ತ ಬಿಎಸ್ಸೆನ್ನೆಲ್ ಅಧಿಕಾರಿ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಭವಿತಾ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.