ಎನ್‌ಎಚ್‌ಎಸ್‌ಗೆ ರಾಜ್ಯಮಟ್ಟದ ಹುದ್ದೆ ನೀಡಬೇಕಿತ್ತು

Published on

ತಾಲೂಕಿಗೆ ಸೀಮಿತಗೊಳಿಸಿದ್ದಕ್ಕೆ ಪುಟ್ಟಸ್ವಾಮಿಗೌಡ ಬೇಸರ | ಹಿಂಬಾಗಿಲ ಮೂಲಕ ಅಧಿಕಾರ ಪಡೆಯುವುದು ತರವಲ್ಲ

ಗೌರಿಬಿದನೂರು: ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರಿಗೆ ತಾಲೂಕಿಗೆ ಸೀಮಿತವಾದ ಎಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವ ಬದಲು ರಾಜ್ಯಮಟ್ಟದ ಹುದ್ದೆ ನೀಡಬಹುದಿತ್ತು ಎಂದು ಶಾಸಕ ಪುಟ್ಟಸ್ವಾಮಿಗೌಡ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಸಿಎಂ ಜತೆ ಚರ್ಚಿಸಿದ್ದೆ. ಐದು ಬಾರಿ ಶಾಸಕರಾಗಿ, ಮಾಜಿ ಸಚಿವರು ಹಾಗೂ ವಿಧಾನಸಭೆ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವವರಿಗೆ ತಾಲೂಕಿಗೆ ಸೀಮಿತವಾದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಆದರೆ ಈಗ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತಾಲೂಕಿನಲ್ಲಿ ಗೊಂದಲ ಮೂಡಿಸಲಾಗಿದೆ ಎಂದರು.

ಎರಡು ವರ್ಷಗಳಿಂದ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುತ್ತಿದ್ದೇನೆ. ಆದರೆ ಜನಾದೇಶಕ್ಕೆ ವಿರುದ್ಧವಾಗಿ ಹಿಂದಿನ ಬಾಗಿಲ ಮೂಲಕ ಅಧಿಕಾರ ಪಡೆದು ರಾಜಕೀಯ ಮಾಡುವುದು ತರವಲ್ಲ. 25 ವರ್ಷ ರಾಜಕಾರಣ ಮಾಡಿಕೊಂಡು ಬಂದವರು ಜನಕ್ಕೆ ಒಳ್ಳೆಯದನ್ನು ಬಯಸಬೇಕು. ಸ್ವಾರ್ಥ ನೋಡಬಾರದು. ಆದರೆ ನನಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಪುಟ್ಟಸ್ವಾಮಿಗೌಡ, ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಅಭಿವೃದ್ಧಿ ಪ್ರಾಧಿಕಾರದ ಆಯ್ಕೆ ಬೇಸರ ತಂದಿಲ್ಲ. ಆದರೆ, ಅವರನ್ನು ತಾಲೂಕಿಗೆ ಸೀಮಿತಗೊಳಿಸಿದ್ದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಾಗ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರಾದ ಗಿರೀಶ್, ಶ್ರೀಕಾಂತ್, ಸಪ್ತಗಿರಿ, ರಾಜಕುಮಾರ್ ಇತರರು ಹಾಜರಿದ್ದರು.

ನಗರಕ್ಕೆ ಮೂರು ಕೆರೆ ನೀರು

ಮುಖಂಡರು ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ. ತಾಲೂಕಿನ ಜನತೆ ನಮ್ಮೊಂದಿಗೆ ಇದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದೇವೆ. ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ತಾಲೂಕಿನ ಕೆರೆಗಳು ತುಂಬಲಿವೆ. ಇದರಲ್ಲಿ ಯಾವುದೇ ಸಂದೇಹ ಬೇಡ. ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿರುವ ಕಾರಣ ಎತ್ತಿನಹೊಳೆ ಯೋಜನೆಯ ಅನುಷ್ಠಾನವಾದ ಬಳಿಕ ವಾಟದಹೊಸಹಳ್ಳಿ ಜತೆಗೆ ಸಮೀಪದಲ್ಲಿರುವ ಕಲ್ಲೂಡಿ, ಗೊಟಕನಾಪುರ ಮೂರು ಕೆರೆಗಳ ನೀರನ್ನು ಸಂಗ್ರಹಿಸಿ ನಗರಕ್ಕೆ ಸರಬರಾಜು ಮಾಡಲು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net