ಮೂಕಬಾಲಕಿ ಕೊಲೆ ಪತ್ತೆಯಾಗದ ದುರುಳರು

FotoJet
Published on

ಮನೆಯವರಿಂದ ಮಾಹಿತಿ ಪಡೆದ ಎಸ್‌ಪಿ | ಸಂತ್ರಸ್ತೆ ಕುಟುಂಬಕ್ಕೆ ಸಂಸದ ಡಾ.ಸಿ ಎನ್.ಮಂಜುನಾಥ್ ಸಾಂತ್ವನ

ಬಿಡದಿ: ಭದ್ರಾಪುರ ಗ್ರಾಮದಲ್ಲಿ ಮೂಕ ಬಾಲಕಿ ಕೊಲೆ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಘಟನೆ ನಡೆದು ನಾಲ್ಕು ದಿನ ಕಳೆದರೂ ಆರೋಪಿಗಳ ಸುಳಿವಿಲ್ಲ. ಇತ್ತ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ವಿನಹ ಕೊಲೆ ಆರೋಪಿಗಳ ಸುಳಿವು ಮಾತ್ರ ಇಲ್ಲದಂತಾಗಿದೆ.

ಹೌದು.., ಭದ್ರಾಪುರದಲ್ಲಿ ಮಾತು ಬಾರದ, ಕಿವಿ ಕೇಳಿಸದ ಅಪ್ರಾಪ್ತೆಯನ್ನು ಭಾನುವಾರ ಕೊಲೆ ಮಾಡಿ ಗ್ರಾಮದ ಕೂಗಳತೆ ದೂರದಲ್ಲಿನ ರೈಲ್ವೆ ಹಳಿಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಕೊಲೆ ನಡೆದು ದಿನಗಳೇ ಉರುಳುತ್ತಿದ್ದರೂ ಸಣ್ಣ ಸುಳಿವೂ ಪೊಲೀಸರಿಗೆ ಸಿಕ್ಕಿಲ್ಲ. ಎಸ್.ಪಿ. ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಚನ್ನಪಟ್ಟಣ ಡಿವೈಎಸ್ಪಿ ಗಿರಿ, ಮಾಗಡಿ ವಿಭಾಗದ ಡಿವೈಎಸ್ಪಿ ಪ್ರದೀಪ್, ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ತಂಡಗಳು ರಚನೆಯಾಗಿದ್ದು, ಒಂದೊಂದು ತಂಡ ಒಂದೊಂದು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಕುಟುಂಬದಿಂದ ಮಾಹಿತಿ ಸಂಗ್ರಹ

ಎಸ್‌ಪಿ ಶ್ರೀನಿವಾಸ್ ಗೌಡ ಅವರು ಗುರುವಾರ ಇಡೀ ದಿನ ಬಿಡದಿ ಠಾಣೆಯಲ್ಲೆ ಇದ್ದು, ಪ್ರಕರಣದ ಮೇಲ್ವಿಚಾರಣೆ ಮಾಡಿದರು. ಬಾಲಕಿಯ ಅಂತ್ಯಕ್ರಿಯೆ ಬುಧವಾರ ನಡೆದಿತ್ತು. ಹಾಗಾಗಿ ಅವರ ಕುಟುಂಬದವರ ಬಳಿ ಬಾಲಕಿ ವಿಚಾರವಾಗಿ ಯಾವುದೇ ಮಾಹಿತಿ ಪಡೆದುಕೊಂಡಿರಲಿಲ್ಲ. ಹಾಗಾಗಿ ಮಧ್ಯಾಹ್ನದ ವೇಳೆಗೆ ತಾಯಿ, ಸಹೋದರ ಸಹೋದರಿಯರನ್ನು ಠಾಣೆಗೆ ಕರೆಸಿ ಖುದ್ದಾಗಿ ಎಸ್‌ಪಿ ವಿಚಾರಿಸಿದರು.

ಸಂಸದರಿಂದ ಆತ್ಮಸ್ಥೈರ್ಯ

ಬಾಲಕಿ ಮನೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಗುರುವಾರ ಭೇಟಿ ನೀಡಿ, ಬಾಲಕಿಯ ತಾಯಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಗಳ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುವುದಾಗಿ ಕುಟುಂಬದವರಿಗೆ ಸಂಸದರು ಭರವಸೆ ನೀಡಿದರು.

ನ್ಯಾಯಾಧೀಶರ ಭೇಟಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪಿ.ಆರ್. ಸವಿತಾ ಅವರೂ ಭೇಟಿ ನೀಡಿ, ಬಾಲಕಿ ತಾಯಿಗೆ ಸಾಂತ್ವನ ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಜಿನಿ ಅವರ ಜತೆಗೆ ಘಟನೆ ವಿಚಾರವಾಗಿ ಮಾತುಕತೆ ನಡೆಸಿದರು. ಘಟನೆ ವಿಚಾರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಕಾರಣಕ್ಕೂ ಆರೋಪಿಗಳ ಪತ್ತೆ ವಿಳಂಬವಾಗಬರಾದು ಎಂದು ತಾಕೀತು ಮಾಡಿದರು.

ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಎ್ಎಸ್‌ಎಲ್ ವರದಿ ಬರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಅಪ್ರಾಪ್ತೆ ಹತ್ಯೆಯ ವಿಚಾರದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ. ಇಂತಹ ಅಮಾನವೀಯ ಕೃತ್ಯಗಳು ಮರುಕಳಿಸಬಾರದು. | ಡಾ.ಸಿ ಎನ್ ಮಂಜುನಾಥ್, ಸಂಸದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net