

ವಿಜಯಪುರ: ಸಮಾಜದಲ್ಲಿರುವ ಬಡ ಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಲಿಂಗಾಯತ ವೀರಶೈವರನ್ನು ಒಂದು ಮಾಡಿದ ಕೀರ್ತಿ ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಲೇಖಕಿ ಡಾ. ಉಷಾದೇವಿ ಹಿರೇಮಠ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಹಾನಗಲ್ ಕುಮಾರ ಸ್ವಾಮಿಗಳ ಸ್ಮರಣೆ ಹಿನ್ನೆಲೆ ಮಂಗಳವಾರ ನಡೆದ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂದಿನ ಹಿರಿಯ ಲಿಂಗಾಯತ ಗಣ್ಯರಾದ ಶಿರಸಂಗಿ ಲಿಂಗರಾಜ, ವಾರದ ಮಲ್ಲಪ್ಪ ಮತ್ತು ಕರಡಿ ಸಿದ್ದಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ದೊರಕಿಸಲು ಶಿಕ್ಷಣ ಸಂಸ್ಥೆ ಹಾಗೂ ಉಚಿತ ಪ್ರಸಾದ ನಿಲಯಗಳನ್ನು ತೆರೆದರು.
ಅಲ್ಲದೇ, ಯುವಕರಿಗೆ ಉದ್ಯೋಗಕ್ಕಾಗಿ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿದ ಪುಣ್ಯ ಪುರುಷರು. ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಸಮುದಾಯ ಕುರಿತು ಸಂಶೋಧಿಸಿ ಹಲವು ಗ್ರಂಥ ರಚಿಸಿ ಲಿಂಗಾಯತ ಸಮುದಾಯಕ್ಕೆ ನ್ಯಾಯ ಒದಗಿಸಿದ ಮಹಾಪುರುಷರ ಹಾನಗಲ್ ಕುಮಾರ ಸ್ವಾಮಿಗಳು ಎಂದು ತಿಳಿಸಿದರು.
ಡಾ. ವಿ.ಡಿ. ಐಹೊಳ್ಳಿ ಮಾತನಾಡಿ, ಹಾನಗಲ್ ಶ್ರೀಗಳು ಶರಣರ ಬದುಕಿನ ರೀತಿ ಲೋಕ ಕಲ್ಯಾಣಕ್ಕಾಗಿ ತ್ಯಾಗ ಮಾಡಿದ ಶ್ರೀಗಳು ಬಡಮಕ್ಕಳಿಗೆ ಶಿಕ್ಷಣ ಒದಗಿಸುವ ಪರಿಕಲ್ಪನೆ ಮೂಡಿದಾಗ ಅವರು ಸ್ಥಾಪಿಸಿದ ಶಿವಯೋಗ ಮಂದಿರ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇಂದಿಗೂ ಕೂಡಾ ಜನರ ಹಿತಕ್ಕಾಗಿ ಶ್ರಮಿಸುತ್ತಿವೆ ಎಂದು ಸ್ಮರಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು.
ಡಾ. ಸೋಮಶೇಖರ ವಾಲಿ, ಎಸ್.ವೈ. ಗದಗ, ಎಸ್.ಎಚ್. ನಾಡಗೌಡ, ಶಾರದಾ ಕೊಪ್ಪ, ಕಾಶಿನಾಥ ಅಣ್ಣೆಪ್ಪನವರ, ಪರಶುರಾಮ ಪೋಳ, ಮಹಾದೇವ ಹಾಲಳ್ಳಿ, ಬಿ.ಎಚ್. ಬಾದರಬಂಡಿ, ಅಮರೇಶ ಸಾಲಕ್ಕಿ, ಅಪ್ಪಾಸಾಹೇಬ ಕೋರಿ, ವಿಠಲ ತೇಲಿ, ಸಂಗಮೇಶ ಬದಾಮಿ ಮತ್ತಿತರರಿದ್ದರು.