

ಸಕಲೇಶಪುರ: ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲೇ ದಲಿತರ ಹಿತ ಕಾಯುವವರು ಇಲ್ಲದಂತಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ವರ್ಗಗಳ ಸಭೆಯಲ್ಲಿ ಮಾತನಾಡಿದ ಮುಖಂಡರು, 15 ವರ್ಷಗಳಿಂದ ಕ್ಷೇತ್ರದಲ್ಲಿ ದಲಿತರೇ ನಮ್ಮನ್ನು ಪ್ರತಿನಿಧಿಸುತ್ತಿದ್ದರೂ ನ್ಯಾಯ ದೊರೆಯುತ್ತಿಲ್ಲ. ದಲಿತರೇ ದಲಿತರನ್ನು ಶೋಷಿಸುವ ಪರಿಸ್ಥಿತಿ ತಾಲೂಕಿನಲ್ಲಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ನಡೆದದ್ದೇನು?: ತಾಲೂಕಿನ ಹೊಸೂರು ಗ್ರಾಮದ ಸರ್ವೇ ನಂಬರ್ 22ರಲ್ಲಿ ದಲಿತರಿಗೆ ನಿವೇಶನ ನೀಡುವ ವಿಷಯದ ಚರ್ಚೆಯ ವೇಳೆ ವಲಯ ಅರಣ್ಯಾಧಿಕಾರಿ ಶಿಲ್ಪಾ ಮಾತನಾಡಿ, ಈ ಭೂಮಿ ಡೀಮ್ಡ್ ಅರಣ್ಯವಾಗಿದೆ. ಆ ಕಾರಣದಿಂದ ಇಲ್ಲಿ ಯಾವುದೇ ಮಂಜೂರಾತಿಗೂ ಅವಕಾಶ ನೀಡುವುದಿಲ್ಲ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಳಲಹಳ್ಳಿ ವೀರೇಶ್, 2010 ರಿಂದ 2023ರ ವರೆಗೆ ದಲಿತರು ಇಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ನಿವೇಶನ ನೀಡಲು ಇಲ್ಲದ ಕಾರಣ ನೀಡುತ್ತಿದ್ದಾರೆ. ಇದೇ ಸರ್ವೇ ನಂಬರ್‌ನಲ್ಲಿ ಸ್ಮಶಾನ ಸೇರಿದಂತೆ ಹಲವು ಯೋಜನೆಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ದಲಿತರಿಗೆ ನಿವೇಶನ ನೀಡಲು ಡೀಮ್ಡ್ ಕಾರಣ ನೀಡುತ್ತಾರೆ, ಇದು ದಮನಕಾರಿ ನೀತಿಯಾಗಿದೆ ಎಂದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ತಾಲೂಕಿನಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪ ಅತಿಯಾಗಿದ್ದು, ಜನವಸತಿ ಪ್ರದೇಶಗಳನ್ನು ಡೀಮ್ಡ್ ಅರಣ್ಯವೆಂದು ಘೋಷಿಸಲಾಗಿದೆ. ಈ ಬಗ್ಗೆ ಸಮರ್ಪಕ ಉತ್ತರ ನೀಡುವಂತೆ ವಲಯ ಅರಣ್ಯಾಧಿಕಾರಿಗೆ ತಾಕೀತು ಮಾಡಿದರು.
ವಲಯ ಅರಣ್ಯಾಧಿಕಾರಿ ಶಿಲ್ಪಾ ಅವರು ಮತ್ತೊಮ್ಮೆ ಜಂಟಿ ಸರ್ವೇ ನಡೆಸಿ ದೋಷ ಸರಿಪಡಿಸಲಾಗುವುದು ಎಂದರು. ಇದರಿಂದ ಕೋಪಗೊಂಡ ಶಾಸಕರು, ಮಾನವೀಯತೆ ಇಲ್ಲದ ಕಾನೂನು ಎಲ್ಲಿದೆ, ಜನರ ವೈರತ್ವ ಕಟ್ಟಿಕೊಂಡರೆ ನಿಮಗೆ ತೊಂದರೆಯಾಗುವುದು ನಿಶ್ಚಿತ. ಜನರು ವಾಸ ಮಾಡುತ್ತಿರುವ ಪ್ರದೇಶದಲ್ಲಿ ನೀವು ತೊಂದರೆ ನೀಡುವುದನ್ನು ನಿಲ್ಲಿಸಿ. ಕುಡಿಯುವ ನೀರಿನ ಕಾಮಗಾರಿಗೂ ತೊಂದರೆ ನೀಡುತ್ತೀರೆಂದರೆ ಏನರ್ಥ, ಅರಣ್ಯ ಬೆಳೆಸಿರುವುದು ನಾವು, ಕೇವಲ ನೋಡಿಕೊಳ್ಳುತ್ತಿರುವುದು ನೀವು ಎಂದು ಹರಿಹಾಯ್ದರು.
ದಲಿತ ಮುಖಂಡ ಮಾಸುವಳ್ಳಿ ಚಂದ್ರು ಮಾತನಾಡಿ, ಅರಣ್ಯ ಇಲಾಖೆ ಹುಟ್ಟುವ ಮೊದಲೇ ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ನಿನ್ನೆ ಮೊನ್ನೆ ನೀವು ನಮ್ಮ ವಸತಿ ಪ್ರದೇಶವನ್ನು ಡೀಮ್ಡ್ ಎಂದು ಘೋಷಿಸಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂದರೆ ಏನರ್ಥ? ಈ ಸಭೆಯಲ್ಲಿ ಡೀಮ್ಡ್ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲೇಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಹೊಸೂರು ಗ್ರಾಪಂನ ಸರ್ವೇ ನಂಬರ್ 22ರಲ್ಲಿದ್ದ 15 ಕುಟುಂಬಗಳಿಗೆ ಅದೇ ಪ್ರದೇಶದಲ್ಲಿ ಅಥವಾ ಗ್ರಾಮದ ಯಾವುದೇ ಸರ್ಕಾರಿ ಜಮೀನಿನಲ್ಲಿ ಮುಂದಿನ ಸಭೆಯೊಳಗೆ ನಿವೇಶನ ನೀಡುವುದು ನಿಮ್ಮ ಕರ್ತವ್ಯ ಎಂದು ತಹಸೀಲ್ದಾರ್ ಮೇಘನಾ ಅವರಿಗೆ ಸೂಚಿಸಿದರು.
ಹಕ್ಕುಪತ್ರ ನೀಡಲು ಅಧಿಕಾರವಿಲ್ಲ: 94 ಸಿ ಅಡಿ ಹಕ್ಕುಪತ್ರ ನೀಡಲು ತಾಲೂಕು ಕಂದಾಯ ಇಲಾಖೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾತನಾಡಿದ ತಹಸೀಲ್ದಾರ್ ಮೇಘನಾ, ಸರ್ಕಾರಿ ಖರಾಬಿನಲ್ಲಿ ಹಕ್ಕುಪತ್ರ ನೀಡಲಿದ್ದೇವೆ. ಆದರೆ, ಡೀಮ್ಡ್ ಹಾಗೂ ಸೆಕ್ಷನ್ 4ರಲ್ಲಿ ಒಳಗೊಂಡಿರುವ ಜಮೀನಿನಲ್ಲಿ ಹಕ್ಕುಪತ್ರ ನೀಡಲು ನಮಗೆ ಅಧಿಕಾರವಿಲ್ಲ, ಈ ಬಗ್ಗೆ ವಿವರಣೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು.
ಹಾಸ್ಟೆಲ್ ಜಾಗ ಗುಳುಂ: ತಾಲೂಕಿನ ಮಳಲಿ ಗ್ರಾಮದಲ್ಲಿ 18 ಗುಂಟೆ ಜಮೀನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಮಂಜೂರಾಗಿತ್ತು. ಆದರೆ, ಇದೇ ಜಾಗವನ್ನು ಜೆಡಿಎಸ್ ನಾಯಕರೊಬ್ಬರು ಕಬಳಿಸುವ ಮೂಲಕ ಕಟ್ಟಡ ನಿರ್ಮಿಸುತ್ತಿದ್ದಾರೆ. ಆದ್ದರಿಂದ, ತಾಲೂಕು ಆಡಳಿತ ಕೊಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ವಶಕ್ಕೆ ಪಡೆದು ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ದಲಿತ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಇದಕ್ಕೆ ದ್ವನಿಗೊಡಿಸಿದ ಶಾಸಕರು ಮುಂದಿನ ಸಭೆಯೊಳಗೆ 18 ಗುಂಟೆ ಜಮೀನಿಗೆ ತಂತಿಬೇಲಿ ನಿರ್ಮಿಸಿರಬೇಕು ಎಂದು ಸೂಚನೆ ನೀಡಿದರು.
ಸರ್ಕಾರಿ ಯೋಜನೆಗಳ ಫಲ ದಕ್ಕುತ್ತಿಲ್ಲ: ದಲಿತರಿಗೆ ಹಲವು ಯೋಜನೆಗಳನ್ನು ಘೋಷಿಸಿರುವ ಸರ್ಕಾರ ಪತ್ರಿಕೆ, ಟಿವಿಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡುವ ಮೂಲಕ ಪ್ರಚಾರ ಪಡೆಯುತ್ತಿದೆ. ಆದರೆ, ಸರ್ಕಾರದ ಈ ಯೋಜನೆಗಳ ಫಲ ದಲಿತರಿಗೆ ದೊರೆಯುತ್ತಿಲ್ಲ. ಬ್ಯಾಂಕಿಗೆ ಹೋದರೆ ದಲಿತರಿಗೆ ಸಾಲ ನೀಡುತ್ತಿಲ್ಲ ಎಂದು ಮುಖಂಡ ದೊಡ್ಡಯ್ಯ ಆಪಾದಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ, ಬ್ಯಾಂಕ್‌ಗಳು ಸಾಲ ನೀಡುವ ವೇಳೆ ಸಿಬಿಲ್ ಸ್ಕೋರ್ ಮುಖ್ಯವಾಗಿದೆ. ಆದರೆ ಸಾಕಷ್ಟು ಫಲಾನುಭವಿಗಳು ಸಣ್ಣಪುಟ್ಟ ಸಾಲ ಮಾಡಿ ಸಕಾಲಕ್ಕೆ ತೀರಿಸದ ಕಾರಣ ಸಿಬಿಲ್ ಸ್ಕೋರ್ ಕಡಿಮೆಯಾಗಿದೆ. ಆದ್ದರಿಂದ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ವಿವರಿಸುತ್ತಿದ್ದಾರೆ ಎಂದರು.
ಮುಂದಿನ ಸಭೆಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಹೆತ್ತೂರು ದೊಡ್ಡಯ್ಯ ಮಾತನಾಡಿ, ತಾಲೂಕಿನ ಪೊಲೀಸ್ ಠಾಣೆಯಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸರ ಸಹಕಾರದಿಂದಾಗಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಕಳೆದ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಪೊಲೀಸರನ್ನು ವರ್ಗಾವಣೆಗೊಳಿಸಿ ಎಂದು ಆಗ್ರಹಿಸಿದರು.
ಮುಖಂಡ ಬೈಕೆರೆ ದೇವರಾಜ್ ಮಾತನಾಡಿ, ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಅವರಣದಲ್ಲಿ ಖಾಸಗಿ ಆಂಬುಲೆನ್ಸ್‌ನವರ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ್, ಆಂಬುಲೆನ್ಸ್ ಹಾವಳಿ ತಡೆಗೆ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ತಾಪಂ ಇಒ ರಾಮಕೃಷ್ಣ, ಡಿವೈಎಸ್‌ಪಿ ಪ್ರಮೋದ್‌ಕುಮಾರ್, ಮುಖಂಡ ನಿರ್ವಾಣಯ್ಯ ಮತ್ತಿತರರಿದ್ದರು.