ಅತ್ತಿಂದಿತ್ತ ವಾಲುತ್ತಿದೆ ಸದಸ್ಯರ ಒಲವು

FotoJet (1)
Published on

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ | ಪ್ರವಾಸದಲ್ಲಿರುವವರು 12ರಂದು ನೇರವಾಗಿ ಮತಕೇಂದ್ರಕ್ಕೆ

ಚಿಕ್ಕಬಳ್ಳಾಪುರ : ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಬಹುತೇಕ ಸದಸ್ಯರು ಪ್ರವಾಸಕ್ಕೆ ಹೋಗಿದ್ದು, ಬಲಾಬಲ ಹೆಚ್ಚಳದ ಕಸರತ್ತು ಜೋರಾಗಿದೆ. ಇದರ ನಡುವೆ, ಸದಸ್ಯರ ಒಲವು ಅತ್ತಿಂದತ್ತ ವಾಲುತ್ತಿದೆ.
ನಗರಸಭೆಯಲ್ಲಿ 31 ಸದಸ್ಯರಿದ್ದಾರೆ. ಒಂದು ಬಣದಲ್ಲಿ ಬಿಜೆಪಿ ಬೆಂಬಲಿತರು ಬೆಂಗಳೂರು ಮೂಲಕ ಹೈದರಾಬಾದ್, ಗುಜರಾತ್, ರಾಜಸ್ಥಾನ ಸೇರಿ ವಿವಿಧೆಡೆ ಅಡ್ಡಾಡುತ್ತಿದ್ದಾರೆ. ಮತ್ತೊಂದು ಬಣದಲ್ಲಿ ಕಾಂಗ್ರೆಸ್ ಬೆಂಬಲಿತರು ಕೋಲ್ಕತ್ತ ಮೂಲಕ ನೇಪಾಳ ಕಡೆಗೆ ಹೋಗಿದ್ದಾರೆ. ಮೂರ್ನಾಲ್ಕು ಸದಸ್ಯರು ಮಾತ್ರ ಚಿಕ್ಕಬಳ್ಳಾಪುರದಲ್ಲಿಯೇ ಉಳಿದುಕೊಂಡಿದ್ದರೂ ಅವರ ಪರವಾಗಿ ಸಂಬಂಧಿಕರು ಪ್ರವಾಸದಲ್ಲಿ ಸೇರಿಕೊಂಡಿದ್ದಾರೆ. ಚುನಾವಣಾ ದಿನವಾದ ಸೆ.12ರಂದು ನಗರಕ್ಕೆ ನೇರವಾಗಿ ಬಂದು ಚುನಾವಣೆ ಪ್ರಕ್ರಿಯೆಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.


ವಿಧಾನಪರಿಷತ್ ಸದಸ್ಯರ ಬಲ
ಕೈ ಪಾಳಯದ ನಾಲ್ವರು ಸದಸ್ಯರು ಕೈ ಕೊಡುವುದು ಖಚಿತವಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ವಿಧಾನ ಪರಿಷತ್ ಸದಸ್ಯರ ಬಲ ನೆಚ್ಚಿಕೊಳ್ಳಲು ಮುಂದಾಗಿದ್ದಾರೆ. ಮತಗಟ್ಟೆ ಅಧಿಕಾರಿಗಳ ಮೂಲಕ ಮತದಾರ ಪಟ್ಟಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯ ಡಿ.ಟಿ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ಎಂ.ಆರ್. ಸೀತಾರಾಮ್ ಮತ ಚಲಾವಣೆಗೆ ಹೆಸರು ಸೇರಿಸುವ ಕೆಲಸವಾಗಿದೆ. ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಸೇರಿ ಇತರ ಕ್ಷೇತ್ರದ ಸದಸ್ಯರನ್ನು ಸೇರಿಸುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಈ ಪ್ರಕ್ರಿಯೆ ಕಮಲ ಪಾಳಯವನ್ನು ಕೆಣಕಿದ್ದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಡೆದುಕೊಳ್ಳುವ ಅಧಿಕಾರಿಗಳ ಧೋರಣೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸ್ವತಃ ಸಂಸದ ಡಾ. ಕೆ.ಸುಧಾಕರ್ ಕೊಟ್ಟಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ಮನವಿ ಸಲ್ಲಿಸಿ, ನಿಯಮಾನುಸಾರ ಚುನಾವಣೆಪ್ರಕ್ರಿಯೆ ನಿರ್ವಹಣೆಗೆ ಒತ್ತಾಯಿಸಿದ್ದಾರೆ.


ಸೆಳೆತಕ್ಕೆ ಸದಸ್ಯರ ತಲ್ಲಣ
ನಗರಸಭೆಯಲ್ಲಿ 16 ಕಾಂಗ್ರೆಸ್, 9 ಬಿಜೆಪಿ, 2 ಜೆಡಿಎಸ್ ಮತ್ತು 4 ಪಕ್ಷೇತರ ಸದಸ್ಯರಿದ್ದು, ಪಕ್ಷಭೇದ ಮರೆತು ಪರಸ್ಪರ ಸದಸ್ಯರ ಸೆಳೆತವು ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸುತ್ತಿದೆ. ಸಂಸದ ಡಾ. ಕೆ.ಸುಧಾಕರ್ ನಿರ್ಣಯ ಪರ ಜೈ ಎನ್ನುವಂತೆ ವರ್ತಿಸುತ್ತಿದ್ದ ದಳದ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ಪ್ರವಾಸ ಹೊರಟಿದ್ದಾರೆ. ಇನ್ನು ಬಿಜೆಪಿ ಬಣದ ಕಡೆಗೆ ವಾಲಿದ್ದ ನಾಲ್ವರು ಕೈ ಸದಸ್ಯರ ಪೈಕಿ ಒಬ್ಬರು ಮತ್ತೆ ಮಾತೃಪಕ್ಷದ ಪರ ನಿಂತುಕೊಂಡಿದ್ದಾರೆ. ಈಗಾಗಲೇ ಮನವೊಲಿಸಿ, ಬಣಕ್ಕೆ ಸೇರಿಸುವ ಕಸರತ್ತು ಜೋರಾಗಿದ್ದು, ಬೆಂಬಲಿಗರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟವಾಗಿದೆ. ಪ್ರತಿ ಬೆಳವಣಿಗೆಯೂ ಆಕಾಂಕ್ಷಿಗಳಲ್ಲಿ ತಲ್ಲಣ ಮೂಡಿಸುತ್ತಿದೆ.


ಕುದುರೆ ವ್ಯಾಪಾರದ ಆತಂಕ
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ೋಷಣೆಯ ಸಂದರ್ಭದಲ್ಲಿ ಆಕಾಂಕ್ಷಿಗಳ ಪೈಪೋಟಿ ಕಂಡು ಬರಲಿಲ್ಲ. ಈಗ ಜಾಲಿ ಪ್ರವಾಸ, ಕುದುರೆ ವ್ಯಾಪಾರ, ವಾರ್ಡ್‌ವಾರು ಅನುಕೂಲಗಳ ಲೆಕ್ಕಾಚಾರಗಳು ನಡೆಯುತ್ತಿವೆ.
ಚುನಾವಣೆಯಲ್ಲಿ ಅಗತ್ಯವಿರುವ ಬಹುಮತಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಲ್ಪಮತಗಳ ಅಂತರವಿದೆ. ಒಂದು ಇಲ್ಲವೇ ಎರಡು ಮತ ಕೈಬಿಟ್ಟು ಹೋದರೂ ಸೋಲು ಗ್ಯಾರಂಟಿ ಎನ್ನುವಂತಾಗಿದೆ. ಹಾಗಾಗಿ ಆದಷ್ಟು ಪಕ್ಷೇತರ, ಎದುರಾಳಿ ಪಕ್ಷದ ಸದಸ್ಯರನ್ನು ಸೆಳೆಯಬೇಕಾಗಿರುವುದು ಅನಿವಾರ್ಯವಾಗಿದೆ. ಇದು ಮತದ ಬೇಡಿಕೆಯನ್ನು ಹೆಚ್ಚಿಸಿದೆ. ಒಂದು ಹಂತದಲ್ಲಿ ಮೊದಲು ಕೆಲ ಸದಸ್ಯರಿಗೆ 5 ಲಕ್ಷ ರೂ. ನೀಡಿ, ಮನವೊಲಿಸಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಮತ್ತೊಂದು ಪಕ್ಷವು 10ರಿಂದ 15 ಲಕ್ಷ ರೂ. ಆಸೆಯನ್ನು ತೋರಿಸಿ ಹೈಜಾಕ್ ಮಾಡಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಚುನಾವಣೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಆಹ್ವಾನ ಬಂತು. ಆದರೆ, ಇದನ್ನು ತಿರಸ್ಕರಿಸಲಾಗಿದೆ. ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿ, ಆಕಾಂಕ್ಷಿಯ ಹಿನ್ನೆಲೆ ಮತ್ತು ವಾರ್ಡ್ ಸೌಕರ್ಯಗಳನ್ನು ನೋಡಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಲಾಗುವುದು. ಕುದುರೆ ವ್ಯಾಪಾರ ನಡೆಯುತ್ತಿರುವುದಂತೂ ಸತ್ಯ.ಹೆಸರು ಹೇಳಲು ಇಚ್ಛಿಸದ ಸದಸ್ಯ, ಚಿಕ್ಕಬಳ್ಳಾಪುರ ನಗರಸಭೆ,


ಕೈನಿಂದ ಆಡಳಿತ ಯಂತ್ರ ದುರುಪಯೋಗ

ಬಿಎಂಟಿಸಿ ಮಾಜಿ ಉಪಾಧ್ಯಕ್ಷ ನವೀನ್‌ಕಿರಣ್ ಆರೋಪ |  ಎಂಎಲ್‌ಸಿಗಳನ್ನು ಮತದಾರ ಪಟ್ಟಿಗೆ ಸೇರಿಸಲು ಆತುರ


 ಚಿಕ್ಕಬಳ್ಳಾಪುರ :  ಸ್ವಪಕ್ಷೀಯ ನಗರಸಭೆ ಸದಸ್ಯರನ್ನು ವಿಶ್ವಾಸದಲ್ಲಿಟ್ಟುಕೊಳ್ಳಲಾಗದೆ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಆತುರಾತುರವಾಗಿ ಮತದಾರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಎಂದೂ ವಾಸವಿರದ ವಿಧಾನಪರಿಷತ್ ಸದಸ್ಯರು ಸಹ ಇಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನೆಲೆಸಿರುವಂತೆ ತೋರಲಾಗುತ್ತಿದೆ. ಇದಕ್ಕೆ ಮತಗಟ್ಟೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಮ್, ಕೋಲಾರದ ಅನಿಲ್ ಕುಮಾರ್, ಯು.ಬಿ.ವೆಂಕಟೇಶ್ ಸೇರಿ ಇತರರನ್ನು ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯ ಮತದಾರ ಪಟ್ಟಿಗೆ ಸೇರಿಸಲಾಗುತ್ತಿದೆ. ಇದಕ್ಕಾಗಿ ಕೊರಚರಪೇಟೆ, ಪ್ರಶಾಂತನಗರದ ಬಾಡಿಗೆ ಮನೆಯಲ್ಲಿ ನೆಲೆಸಿರುವಂತೆ ಸುಳ್ಳು ವಿಳಾಸ ತೋರಿಸಲಾಗುತ್ತಿದೆ. ಇದಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದರು.
ನಗರಸಭಾ ಮಾಜಿ ಸದಸ್ಯ ಕಿಸಾನ್ ಕೃಷ್ಣಪ್ಪ, ಮುಖಂಡರಾದ ಮರುಳುಕುಂಟೆ ಕೃಷ್ಣಮೂರ್ತಿ, ಆನಂದ್ ಅನು ಮತ್ತಿತರರು ಇದ್ದರು.

ಮತದಾರ ಪಟ್ಟಿ ನೀಡಲು ನಿರ್ಲಕ್ಷ್ಯ
ಮಾಹಿತಿಹಕ್ಕು ಕಾಯ್ದೆಯಡಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸುವವರ ಪಟ್ಟಿಯ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ತೋರಲಾಗುತ್ತಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ನಿಯಮಗಳ ಉಲ್ಲಂಘನೆ ಮತ್ತು ದಾಖಲೆ ತಿದ್ದುಪಡಿಗೆ ಮುಂದಾದಲ್ಲಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ನವೀನ್ ಕಿರಣ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net