ಮಹಾನ್ ನಾಯಕರ ಆದರ್ಶಗಳು ಸ್ಫೂರ್ತಿದಾಯಕ

oppo_2
oppo_2
Published on

ಹನೂರು: ಮಹಾನ್ ನಾಯಕರ ಜಯಂತಿಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವರ ಆದರ್ಶಗಳು ಎಲ್ಲರಿಗೂ ಸ್ಫೂರ್ತಿದಾಯಕ. ಆದ್ದರಿಂದ ಪ್ರತಿಯೊಬ್ಬರೂ ಜಯಂತಿಯನ್ನು ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.


ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣವು ಹಿಂದು ಧರ್ಮದ ಪವಿತ್ರ ಗ್ರಂಥವಾಗಿದ್ದು, 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ಶ್ರೇಷ್ಠ ಕೃತಿಯಾಗಿದೆ. ಇದರಲ್ಲಿ ಕ್ರೌರ್ಯ, ಹಿಂಸೆ ಸಮಾಜಕ್ಕೆ ಮಾರಕ, ಜೀವನದಲ್ಲಿ ಸುಖ, ಶಾಂತಿಯನ್ನು ಪಡೆಯಬೇಕಾದರೆ ನೈತಿಕ ಚೌಕಟ್ಟಿನಲ್ಲಿ ನಡೆಯಬೇಕು. ಸಮಾಜದಲ್ಲಿ ಉತ್ತಮ ಸುಸಂಸ್ಕೃತ ವ್ಯಕ್ತಿಯಾಗಿ ಬದುಕನ್ನು ರೂಪಿಸಿಕೊಳ್ಳಲು ಹಲವು ಆದರ್ಶ, ತತ್ವಗಳನ್ನು ಒಳಗೊಂಡಿದೆ. ಹಾಗಾಗಿ ಮಾನವ ಕುಲಕ್ಕೆ ಇಂತಹ ಮಹಾಕಾವ್ಯ ನೀಡಿದ ಮಹರ್ಷಿಗಳು ಶ್ರೇಷ್ಠ ದಾರ್ಶನಿಕರಾಗಿದ್ದು, ಆದಿಕವಿ ಎನಿಸಿಕೊಂಡಿದ್ದಾರೆ. ಅವರು ರಚಿಸಿರುವ ಕಾವ್ಯವನ್ನು ವಿದೇಶಿಯರು ಅಧ್ಯಯನ ನಡೆಸುತ್ತಿದ್ದು, ವಿವಿಧ ಭಾಷೆಗಳಲ್ಲಿ ತರ್ಜುಮೆಯಾಗುತ್ತಿರುವುದು ರಾಮಾಯಣದ ಮಹತ್ವವನ್ನು ತಿಳಿಸುತ್ತದೆ. ಆದ್ದರಿಂದ ಕೇವಲ ಜಯಂತಿ ಆಚರಿಸಿದರೆ ಸಾಲದು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸುವುದು ಸಾರ್ಥಕತೆ ಎನಿಸುತ್ತದೆ ಎಂದು ತಿಳಿಸಿದರು.


ಕೊಳ್ಳೇಗಾಲದ ಸರ್ಕಾರಿ ಮಹದೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ಶ್ರೀಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಉಪನ್ಯಾಸ ನೀಡಿದರು. ಬಿಇಒ ಗುರುಲಿಂಗಯ್ಯ, ತಾಪಂ ಇಒ ಉಮೇಶ್, ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ರಾಜೇಶ್, ರಾಜಸ್ವ ನಿರೀಕ್ಷಕ ಶೇಷಣ್ಣ ಮತ್ತಿತರರು ಹಾಜರಿದ್ದರು.


ಸಮುದಾಯದ ಮುಖಂಡರು ಗೈರು
: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಸಂಬಂಧ ಇತ್ತೀಚೆಗೆ ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಾಯಕ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಈ ವೇಳೆ ಮುಖಂಡರು ಅ.27ರಂದು ಪಟ್ಟಣದಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ತಿಳಿಸಿದ್ದು, ಅ.17ರಂದು ಸರ್ಕಾರದ ವತಿಯಿಂದ ನಡೆಯುವ ಜಯಂತಿಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಸಮುದಾಯದ ಮುಖಂಡರು ಗೈರಾಗಿದ್ದರು. ಇದರಿಂದ ಜಯಂತಿ ಕಾರ್ಯಕ್ರಮವು ಅಧಿಕಾರಿಗಳು ಹಾಗೂ ನೌಕರರಿಗಷ್ಟೇ ಸೀಮಿತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net