

ಕಾಸರಗೋಡು: ಸ್ಥಳ ನೀಡಿದ್ದ ಜಾಗದ ಮಾಲೀಕನ ಬೆದರಿಕೆ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಿತಿ ಗಂಭೀರವಾಗಿದೆ. ಬಂದಡ್ಕ ಪಡ್ಪು ನಿವಾಸಿ, ವೆಲ್ಡಿಂಗ್ ಕಾರ್ಮಿಕ ಜಯರಾಂ ಎಂಬುವರ ಪತಿ ರೇಜ್ಮಾ(35)ಇಲಿ ಪಾಷಾಣ ಸೇವಿಸಿ ಗಂಭೀರಾವಸ್ಥೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯರಾಂ ಬಂದಡ್ಕ ಏಣಿಯಡಿ ಎಂಬಲ್ಲಿ 2020ರಲ್ಲಿ ಐದು ಸೆಂಟ್ ಜಾಗ ಖರೀದಿಸಿ, ಅದರಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಜಾಗ ನೀಡಿದ ವ್ಯಕ್ತಿ ಇತ್ತೀಚೆಗೆ ನಿಧನರಾಗಿದ್ದು, ಈ ಮಧ್ಯೆ ವಿದೇಶದಲ್ಲಿದ್ದ ಅವರ ಪುತ್ರ ಆಗಮಿಸಿ, ತಂದೆ ಮಾರಾಟ ಮಾಡಿರುವ ಅದೇ ಜಾಗಕ್ಕೆ ಮತ್ತಷ್ಟು ಮೊತ್ತ ನೀಡುವಂತೆ ಜಯರಾಂ ಅವರಲ್ಲಿ ಆಗ್ರಹಿಸಿದ್ದಾನೆ. ಜಯರಾಂ ಹೆಚ್ಚಿನ ಮೊತ್ತ ನೀಡಲು ನಿರಾಕರಿಸಿದಾಗ 20 ಮಂದಿಯನ್ನು ಕರೆತಂದು ಜಯರಾಮ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಜಯರಾಂ ಪತ್ನಿ ರೇಷ್ಮಾ ಚೀಟಿಯೊಂದನ್ನು ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.