ದ.ಕ., ಉಳ್ಳಾಲ ಖಾಝಿ ಕೂರತ್ ತಂಙಳ್ ವಿಧಿವಶ

tangal
ಕೂರತ್ ತಂಙಳ್
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಳ್ಳಾಲ ಖಾಝಿಯಾಗಿದ್ದ ದಿ.ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ(64) (ಕೂರತ್ ತಂಙಳ್) ಸೋಮವಾರ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಉಳ್ಳಾಲದಲ್ಲಿ ಜನಸ್ತೋಮ

ಸೋಮವಾರ ಮಧ್ಯಾಹ್ನ 2ರವರೆಗೆ ಎಟ್ಟಿಕ್ಕುಳಂನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ರಾತ್ರಿ ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ವಠಾರಕ್ಕೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ಉಳ್ಳಾಲದಿಂದ ಎಟ್ಟಿಕುಳಂಗೆ ತೆರಳಿದ್ದ ಹಲವರು ಅರ್ಧ ದಾರಿಯಿಂದಲೇ ವಾಪಸ್ ಬಂದಿದ್ದು, ನೇರವಾಗಿ ಉಳ್ಳಾಲಕ್ಕೆ ಆಗಮಿಸಿದ್ದರು.

ಸೋಮವಾರ ಉಳ್ಳಾಲ ದರ್ಗಾದಲ್ಲಿ ಕಾರ್ಯಕ್ರಮಕ್ಕೆ ಕೂರತ್ ತಂಙಳ್ ನೇತೃತ್ವದಲ್ಲಿ ಇಂಡಿಯನ್ ಗ್ರಾೃಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಸಹಿತ ಗಣ್ಯರು ಭಾಗವಹಿಸಬೇಕಿತ್ತು. ಎ.ಪಿ.ಉಸ್ತಾದರು ಬೆಳಗ್ಗೆಯೇ ದ.ಕ. ಜಿಲ್ಲೆಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಮೊದಲೇ ಸಿದ್ಧತೆ ನಡೆಸಿದ್ದರು. ಆದರೆ ತಂಙಳ್ ನಿಧನದ ಸುದ್ದಿ ತಿಳಿದ ಕ್ಷಣದಿಂದಲೇ ಜನ ದರ್ಗಾದಲ್ಲಿ ಜಮಾಯಿಸತೊಡಗಿದರು. ತಂಙಳ್ ನಿಧನದ ಸುದ್ದಿ ಬಂದಾಕ್ಷಣದಿಂದಲೇ ಉಳ್ಳಾಲ ಕೇಂದ್ರ ಜುಮಾ ಮಸೀದಿ ಮೈಕ್ ಮೂಲಕ ಕುರ್‌ಆನ್ ಪಠಣ ಆರಂಭಿಸಲಾಯಿತು.

ದರ್ಗಾಕ್ಕೆ ದೌಡಾಯಿಸಿದ ಅಧಿಕಾರಿಗಳು!

ಕೂರತ್ ತಂಙಳ್ ಅವರಿಗೆ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅಭಿಮಾನಿಗಳ ಸಂಖ್ಯೆ ಅತ್ಯಧಿಕವಾಗಿದೆ. ಉಳ್ಳಾಲಕ್ಕೆ ಪಾರ್ಥಿವ ಶರೀರ ತರಲಾಗುವ ವಿಚಾರ ಬಹಿರಂಗಗೊಂಡ ಕೂಡಲೇ ಪೊಲೀಸ್ ಅಧಿಕಾರಿಗಳ ತಂಡ ದರ್ಗಾಕ್ಕೆ ದೌಡಾಯಿಸಿ ಟ್ರಾಫಿಕ್ ವ್ಯವಸ್ಥೆ ಮತ್ತು ಬಂದೋಬಸ್ತ್ ಬಗ್ಗೆ ಸಮಾಲೋಚನೆ ನಡೆಸಿದರು. ಉಳ್ಳಾಲಬೈಲ್, ಮಾಸ್ತಿಕಟ್ಟೆ ಹಝ್ರತ್ ಶಾಲಾ ಮೈದಾನ, ಉಳ್ಳಾಲ ಬೀಚ್, ಭಗವತೀ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅಲ್ಲಿಂದ ಪಾರ್ಥೀವ ಶರೀರವನ್ನು ಪುತ್ತೂರಿನ ಕೂರತ್‌ಗೆ ಕೊಂಡೊಯ್ಯಲಾಯಿತು.

ಉಳ್ಳಾಲಕ್ಕೆ ಹೊರಟಿದ್ದ ವೇಳೆ ಹೃದಯಾಘಾತ

ಉಳ್ಳಾಲ ಸಯ್ಯದ್ ಮದನಿ ದರ್ಗಾ ಮತ್ತು ಅರೆಬಿಕ್ ಟ್ರಸ್ಟ್ ಅಧೀನದಲ್ಲಿರುವ ಸಯ್ಯದ್ ಮದನಿ ಶರೀಯತ್ ಕಾಲೇಜಿನ ವಸತಿ ಗೃಹದ ಕಟ್ಟಡಕ್ಕೆ ಸೋಮವಾರ ಸಂಜೆ 3.30ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮ ಖಾಝಿಯಾಗಿದ್ದ ಕೂರತ್ ತಂಙಳ್ ನೇತೃತ್ವದಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ದರ್ಗಾ ವಠಾರದಲ್ಲಿ ಸಿದ್ಧತೆ ಮಾಡಲಾಗಿತ್ತು. ಭಾನುವಾರ ರಾತ್ರಿ ಕಾಸರಗೋಡಿನ ಕಮ್ಮಾಡಂ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದ್ದರು. ಬಳಿಕ ಎಟ್ಟಿಕ್ಕುಳಂನಲ್ಲಿರುವ ಮನೆಗೆ ತೆರಳಿದ್ದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಉಳ್ಳಾಲಕ್ಕೆ ಹೊರಡಲು ಸಿದ್ಧರಾಗುತ್ತಿದ್ದರು. ಈ ವೇಳೆ ಹೃದಯ ಸ್ತಂಭನ ಆಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಅವರ ದಿಢೀರ್ ನಿಧನದ ಸುದ್ದಿ 11 ಗಂಟೆ ವೇಳೆಗೆ ಉಳ್ಳಾಲಕ್ಕೆ ತಲುಪಿದ್ದು, ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು.

ಸ್ಪೀಕರ್ ಕಾರ್ಯಕ್ರಮ ರದ್ದು

ತೊಕ್ಕೊಟ್ಟಿನಲ್ಲಿ ಟ್ಯಾಕ್ಸಿ-ಮ್ಯಾಕ್ಸಿಕ್ಯಾಬ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪೀಕರ್ ಯು.ಟಿ.ಖಾದರ್ ತರಾತುರಿಯಲ್ಲಿ ಸಭಾ ಕಾರ್ಯಕ್ರಮ ಮುಗಿಸಿ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದರು. ಇದೇ ವೇಳೆ ತಂಙಳ್ ನಿಧನದ ಸುದ್ದಿ ಬಂದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಎಟ್ಟಿಕುಳಂಗೆ ತೆರಳಿದರು.

ಶಿಕ್ಷಣ ಸಂಸ್ಥೆಗಳಿಗೆ ರಜೆ

ಉಳ್ಳಾಲ ದರ್ಗಾ ಅಧೀನದಲ್ಲಿ ಲೌಕಿಕ ಶಿಕ್ಷಣಕ್ಕೆ ಚಾರಿಟೆಬಲ್ ಟ್ರಸ್ಟ್ ಮತ್ತು ಧಾರ್ಮಿಕ ಅರೆಬಿಕ್ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಚಾರಿಟೆಬಲ್ ಟ್ರಸ್ಟ್ ಅಧೀನದಲ್ಲಿ 14 ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಮೂರು ಕಾಲೇಜುಗಳು, ಅರೆಬಿಕ್ ಟ್ರಸ್ಟ್ ಅಧೀನದಲ್ಲಿ 32 ಮದ್ರಸಾಗಳು ಕಾರ್ಯಾಚರಿಸುತ್ತಿದ್ದು, ತಂಙಳ್ ನಿಧನದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಯಿತು.

ಮುಖ್ಯಮಂತ್ರಿ ಸಂತಾಪ

ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನಾಯಕರು, ಹಿರಿಯರು ಆದ ಸೈಯ್ಯದ್ ಕೂರತ್ ತಂಙಳ್ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಸದಾಕಾಲ ಸಮಾಜದ ಹಿತವನ್ನೇ ಬಯಸುತ್ತಿದ್ದ, ಕೋಮು ಸಾಮರಸ್ಯ ಸ್ಥಾಪಿಸುವ ನಿಟ್ಟಿನಲ್ಲಿ ಸುದೀರ್ಘ ಕಾಲ ಅವಿರತವಾಗಿ ಶ್ರಮಿಸಿದ್ದ ಹಿರಿಯ ಚೇತನದ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶೋಕ ವ್ಯಕ್ತಪಡಿಸಿದ್ದಾರೆ.

ಆಧ್ಯಾತ್ಮಿಕ ಚಿಕಿತ್ಸೆಯಿಂದ ಖ್ಯಾತಿ

ಕೇರಳದ ಎಟ್ಟಿಕುಳಂ ಕೂರತ್ ತಂಙಳ್ ಅವರ ಹುಟ್ಟೂರು. ಆದರೂ ತಂದೆಯ ಹಾದಿಯನ್ನೇ ಹಿಡಿದ ಅವರು ಹಲವು ವರ್ಷಗಳ ಹಿಂದೆ ಕರಾವಳಿಗೆ ಬಂದು ಪುತ್ತೂರಿನ ಕೂರ ಎನ್ನುವ ಅತ್ಯಂತ ಗ್ರಾಮೀಣ ಪ್ರದೇಶವನ್ನು ಆಯ್ಕೆ ಮಾಡಿ ಧಾರ್ಮಿಕ ಸೇವೆ ಆರಂಭಿಸಿದ್ದರು. ಬಳಿಕ ಅಲ್ ಫಝಲ್ ಎಜುಕೇಶನ್ ಸೆಂಟರ್ ಎನ್ನುವ ಧಾರ್ಮಿಕ ಕೇಂದ್ರ ಸ್ಥಾಪಿಸಿದ್ದರು. ಆರಂಭದ ದಿನಗಳಲ್ಲಿ ಬೆರಳೆಣಿಕೆಯ ಜನರು ಮಾತ್ರ ಬರುತ್ತಿದ್ದರು. ಕಾಯಿಲೆ, ವಿವಿಧ ಸಮಸ್ಯೆಗಳೊಂದಿಗೆ ಬಂದವರಿಗೆ ಸಾಂತ್ವನದ ನುಡಿಗಳೊಂದಿಗೆ ಆಧ್ಯಾತ್ಮಿಕ ರೀತಿಯ ಪರಿಹಾರ ಕಲ್ಪಿಸುತ್ತಿದ್ದರು. ಸರಳ ಜೀವನನ್ನು ನಡೆಸುತ್ತಿದ್ದ ಅವರ ಹೆಸರು ನಂತರದ ದಿನಗಳಲ್ಲಿ ಎಲ್ಲೆಡೆ ಪಸರಿಸಿ ಜನಸ್ತೋಮವೇ ಬರುತ್ತಿತ್ತು. ಇವರಿಂದಾಗಿಯೇ ಕೂರ ಹೆಸರು ನಾಡಿನಾದ್ಯಂತ ಪಸರಿಸಿದ್ದು, ಜನರು ‘ಕೂರತ್ ತಂಙಳ್’ ಎಂದೇ ಕರೆಯತೊಡಗಿ ಅದೇ ಹೆಸರು ಶಾಶ್ವತವಾಯಿತು. ಇದೀಗ ಕೂರದಲ್ಲೇ ಅವರ ಅಂತ್ಯ ಸಂಸ್ಕಾರವನ್ನೂ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net