ಹೈಕೋರ್ಟ್ ತಡೆಯಾಜ್ಞೆ ಆದೇಶಕ್ಕಿಲ್ಲ ಕಿಮ್ಮತ್ತು

1212
Published on

ದೌರ್ಜನ್ಯದಿಂದ ರಸ್ತೆ ವಿಸ್ತರಣೆಗೆ ಮುಂದಾದ ಗುತ್ತಿಗೆದಾರ
ಜೈಲಿಗೆ ಕಳುಹಿಸುವ ಬೆದರಿಕೆವೊಡ್ಡಿದ ಇಂಜಿನಿಯರ್


ಬಾಗೇಪಲ್ಲಿ: ಹೈಕೋರ್ಟ್ ತಡೆಯಾಜ್ಞೆ ಆದೇಶವನ್ನು ಉಲ್ಲಂಸಿ, ನಮ್ಮ ಮೇಲೆ ದೌರ್ಜನ್ಯ ಎಸಗಿ ರಸ್ತೆ ಕಾಮಗಾರಿಗೆ ಗುತ್ತಿಗೆದಾರ ಮುಂದಾಗಿರುವುದಾಗಿ ಮಿಟ್ಟೇಮರಿ ಗ್ರಾಮಸ್ಥರು ಅಲವತ್ತುಕೊಂಡರು.
ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ಮಿಟ್ಟೇಮರಿ- ಬಾಗೇಪಲ್ಲಿ ಮಾರ್ಗ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ರಾಜ್ಯ ಹೆದ್ದಾರಿಯಾನ್ನಾಗಿಸಿದ ಸಮಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ರೈತರಿಗೆ, ನಿವೇಶನ ಮತ್ತು ಕಟ್ಟಡ ಮಾಲೀಕರಿಗೆ ನಯಾ ಪೈಸೆಯೂ ಪರಿಹಾರ ಕೊಟ್ಟಿಲ್ಲ. ಭೂ ಸ್ವಾಧೀನವಾಗಿರುವ ಸುತ್ತೋಲೆಯೂ ಅಧಿಕಾರಿಗಳ ಬಳಿ ಇಲ್ಲ. ರಾಜಕಾರಣಿಗಳ ಆಣತಿಯಂತೆ ನಡೆದುಕೊಳ್ಳುವ ಅಧಿಕಾರಿಗಳು, ಗುತ್ತಿಗೆದಾರರನ್ನು ಮೆಚ್ಚಿಸುವ ಉದ್ದೇಶಕ್ಕಾಗಿ ರಸ್ತೆ ವಿಸ್ತರಣೆ ಬಗ್ಗೆ ಜಿಲ್ಲಾಧಿಕಾರಿಗಳಿಂದಾಗಲಿ ಅಥವಾ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದಿದ್ದರೂ ಸ್ಥಳೀಯ ಆಡಳಿತ ಯಂತ್ರಾಂಗ, ರಾಜಕಾರಣಿಗಳ ಮೌಖಿಕ ಆದೇಶದಂತೆ ರಸ್ತೆ ವಿಸ್ತರಣೆಗೆ ಮುಂದಾಗಿ, ರೈತರಿಗೆ, ನಿವೇಶನ ಮತ್ತು ಕಟ್ಟಡ ಮಾಲೀಕರಿಗೆ ವಂಚಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಬಗ್ಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರೂ ಆದೇಶ ಪಾಲಿಸದೆ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಅಲವತ್ತುಕೊಂಡ ಗ್ರಾಮಸ್ಥರು ಮನೆ, ಅಂಗಡಿಗಳಿಗೆ ಪರಿಹಾರ ಕೊಟ್ಟು, ಸ್ಥಳೀಯ ಅಧಿಕಾರಿಗಳ ಕಿರುಕುಳದಿಂದ ಪಾರು ಮಾಡುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಮುಂದೆ ಅಳಲು: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದೌರ್ಜನ್ಯ ಪ್ರಶ್ನಿಸಿರುವ ಮಿಟ್ಟೇಮರಿ ಗ್ರಾಮಸ್ಥರು, ಅನಧಿಕೃತ ರಸ್ತೆ ವಿಸ್ತರಣೆ ಕಾರ್ಯಾಚರಣೆಗೆ ಹೈಕೋರ್ಟ್‌ನಿಂದ ತಂದಿರುವ ತಡೆಯಾಜ್ಞೆ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಕೊಟ್ಟು ಅಳಲು ತೋಡಿಕೊಂಡಿದ್ದಾರೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರಸ್ತೆ ವಿಸ್ತರಣೆ ಮಾಹಿತಿ ಇನ್ನೂ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ ಎಂದು ದೂರುದಾರರ ಸಮ್ಮುಖದಲ್ಲೇ ಲೋಕೋಪಯೋಗಿ ಇಲಾಖೆ ಇಇ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

ಕಟ್ಟಡ ಮಾಲೀಕರಿಗೆ ಇಂಜನಿಯರ್ ಧಮ್ಕಿ: ಸುಪ್ರೀಂ ಕೋರ್ಟ್, ಹೈ ಕೋರ್ಟ್ ತಡೆಯಾಜ್ಞೆ ಇವೆಲ್ಲ ನಮ್ಮ ಇಲಾಖೆ ಮುಂದೆ ಏನು ನಡೆಯುವುದಿಲ್ಲ. ಕಟ್ಟಡಗಳ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಕೇಸು ದಾಖಲಿಸಿ ನಿಮ್ಮನ್ನು ನಿಮಿಷದಲ್ಲಿ ಜೈಲಿಗೆ ಕಳುಹಿಸುವುದಾಗಿ ಸ್ಥಳೀಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ವೊಬ್ಬರು ಮಿಟ್ಟೇಮರಿ ಗ್ರಾಮಸ್ಥರಿಗೆ ಧಮ್ಕಿ ಹಾಕಿ ಬೆದರಿಸಿ ಕೋರ್ಟ್ ತಡೆಯಾಜ್ಞೆ ಉಲ್ಲಂಸಿ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.


" ಮಿಟ್ಟೇಮರಿ ಗ್ರಾಮದಲ್ಲಿ ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕಟ್ಟಡ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ನಾವು ಹೈಕೋರ್ಟ್ ತಡೆಯಾಜ್ಞೆ ಪ್ರತಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದಾಗ ಅವರಿಗೆ ರಸ್ತೆ ವಿಸ್ತರಣೆಯ ಮಾಹಿತಿಯೇ ಇಲ್ಲ ಎಂಬ ವಿಷಯ ಗೊತ್ತಾಯಿತು. ಸ್ಥಳೀಯ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ನೀಡಲು ಟೊಂಕ ಕಟ್ಟಿ ನಿಂತಿದ್ದಾರೆ."
ಡಿ.ಎನ್.ರಮೇಶ್, ಮಿಟ್ಟೇಮರಿ ಗ್ರಾಮ.

" ಬಾಗೇಪಲ್ಲಿ- ಮಿಟ್ಟೇಮರಿ ಮಾರ್ಗದಲ್ಲಿರುವ ಹಲವು ಕಟ್ಟಡಗಳ ಸ್ಥಳ ಭೂ ಪರಿವರ್ತನೆ ಆಗಿ ಇ ಸ್ವತ್ತುಗಳಾಗಿವೆ. ಮನೆ ಮತ್ತು ಅಂಗಡಿ ಮಾಲೀಕರಿಗೆ ಕನಿಷ್ಠ ನೋಟಿಸ್ ನೀಡದೆ ಕಟ್ಟಡಗಳನ್ನು ಕೆಡವಲು ಮುಂದಾಗಿರುವ ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದೌರ್ಜನ್ಯ ಜನರ ನಿದ್ದೆಗೆಡಿಸಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಸ್ಥಳೀಯ ಅಧಿಕಾರಿಗಳು ಕಾನೂನಿಗೆ ಗೌರವ ನೀಡುತ್ತಿಲ್ಲ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತೀದ್ದೀರಾ ಎಂದು ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನಹರಿಸಿ ದೌರ್ಜನ್ಯ ತಡೆಯಬೇಕು ಎಂಬುದು ನಮ್ಮ ಮನವಿ."
ದಯಾನಂದ್, ಬೇಕರಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net