ಸಂಭ್ರಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ

ಸಂಭ್ರಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ
Published on

ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ

ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶುಕ್ರವಾರ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು ಗ್ರಾಮಗಳ ಜನರು ಒಟ್ಟಿಗೆ 13 ದಿನಗಳ ಕಾಲ ಆಚರಿಸುವ ಸುಗ್ಗಿಉತ್ಸವ ಶುಕ್ರವಾರ ತೆರೆ ಕಂಡಿತು. ಗ್ರಾಮಗಳ ವ್ಯಾಪ್ತಿಗೆ ಒಳಪಡುವ ನಿವಾಸಿಗಳು ಸುಗ್ಗಿ ಉತ್ಸವದಲ್ಲಿ ಶ್ರೀ ಸಬ್ಬಮ್ಮ ದೇವಿಗೆ ಮಡೆ ಅರ್ಪಿಸುವ ಮೂಲಕ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಳೆದ ಹದಿಮೂರು ದಿನಗಳಿಂದ ಕೆಲ ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರಾದಾಯವನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ಸುಗ್ಗಿ ಉತ್ಸವದಲ್ಲಿ ಏನಾದರೂ ತಪ್ಪುಗಳು ನಡೆದಿದ್ದರೆ ಎಲ್ಲರನ್ನು ಸಬ್ಬಮ್ಮ ದೇವಿ ಕ್ಷಮೆ ನೀಡಬೇಕೆಂದು ಉತ್ಸವ ಸಮಿತಿ ಅಧ್ಯಕ್ಷ ರಾಜಗೋಪಾಲ್ ದೇವಿಗೆ ಮನವಿ ಸಲ್ಲಿಸಿದರು.

ಗ್ರಾಮದೇವತೆಯಾದ ಸಬ್ಬಮ್ಮ ಎಲ್ಲಾ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಶುಭ ಸಮಾರಂಭಗಳಿಗೆ ಆಶೀರ್ವಾದ ನೀಡಬೇಕು. ಸಕಾಲದಲ್ಲಿ ಮಳೆ ಬೆಳೆಯಾಗುವಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜು ಮಕ್ಕಳು ವಿದ್ಯೆ ಕಲಿತು, ದೊಡ್ಡ ಹುದ್ದೆಗಳನ್ನು ಪಡೆಯುವಂತೆ ಹರಸು ತಾಯಿ ಎಂದು ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸುಗ್ಗಿ ಕುಣಿತದ ತಂಡದಿಂದ ಸುಗ್ಗಿ ಕುಣಿತ, ಇನ್ನೊಂದೆಡೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಸಂಪ್ರಾದಾಯದಂತೆ ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸುಗ್ಗಿ ಕಟ್ಟೆಯ ಮುಖ್ಯ ರಂಗಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಮಾಡಿಕೊಂಡ ಭಕ್ತರು ಈಡುಗಾಯಿ ಸೇವೆ ಅರ್ಪಿಸಿದರು.

ಕುಟುಂಬದೊಂದಿಗೆ ತವರಿಗೆ ಆಮಿಸಿದ ಮಹಿಳೆಯರು, ಈಡುಗಾಯಿ ಹಾಕಿ ಪೂಜೆ ಸಲ್ಲಿಸಿದರು. ದೇವತಾ ಕಾರ್ಯದಲ್ಲಿ ಪ್ರದಾನ ಅರ್ಚಕರಾಗಿ ಊರೊಳಗಿನಕೊಪ್ಪದ ಡಿ.ಎನ್.ಶಿವಕುಮಾರ್, ಊರು ಒಡೆಯನ ದೇವರ ಅರ್ಚಕ ದೊಡ್ಡಮನೆ ಕೊಪ್ಪದ ಡಿ.ಎಂ.ದಿಲೀಪ್, ಮದನೆ ದೇವರ ಅರ್ಚಕರಾಗಿ ಶಿವಕುಮಾರ್, ನಿಶಾಂತ್ ಕಾರ್ಯ ನಿರ್ವಹಿಸಿದರು. ಕಳೆದ 13 ದಿನದಿಂದ ಸುಗ್ಗಿ ಕಾರ್ಯವನ್ನು ನಿರ್ವಹಿಸಿದವರಿಗೆ, ಗ್ರಾಮದ ಪ್ರಮುಖರಿಗೆ ಮಡೆಯನ್ನು ವಿತರಿಸಿ, ಗೌರವಿಸಲಾಯಿತು. ಶಾಸಕ ಡಾ.ಮಂತರ್‌ಗೌಡ ಹಾಗೂ ಪ್ರಮುಖರು ಸುಗ್ಗಿಉತ್ಸವದಲ್ಲಿ ಪೂಜೆ ಸಲ್ಲಿಸಿದರು.

ಕಾರ್ಯದರ್ಶಿ ಎಚ್.ಎಲ್. ಮಹೇಶ್, ಖಜಾಂಚಿ ಎಂ.ಈ. ಕೃಷ್ಣಪ್ಪ, ಟಿ.ಕೆ.ಮಾಚಯ್ಯ, ಡಿ.ಪಿ.ಕುಶಾಲಪ್ಪ, ಐ.ಎನ್.ವಿಠಲ್ ರಾಜ್, ಪಟೇಲರಾದ ಯೋಗೇಂದ್ರ, ದೊಡ್ಡತೋಳೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ರವಿ, ಚಿಕ್ಕತೋಳೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮೇಶ್ ಅನೇಕ ಗಣ್ಯರು ಉತ್ಸವದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net